ADVERTISEMENT

ಶಿರಸ್ತೇದಾರ್‌ಗೆ 4 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 19:18 IST
Last Updated 4 ಫೆಬ್ರುವರಿ 2019, 19:18 IST

ಬೆಂಗಳೂರು: ಪಿತ್ರಾರ್ಜಿತ ಆಸ್ತಿಯ ಖಾತೆ ಬದಲಾವಣೆ ಮಾಡಲು ವ್ಯಕ್ತಿಯೊಬ್ಬರಿಂದ ₹ 80 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಶಿರಸ್ತೇದಾರ್‌ ಒಬ್ಬರಿಗೆ ಇಲ್ಲಿನ ಸಿಎಂಎಂ 79ನೇ ನ್ಯಾಯಾಲಯ ₹ 3 ಲಕ್ಷ ದಂಡ ಹಾಗೂ 4 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸಿಂಗನಾಯಕನಹಳ್ಳಿಯಲ್ಲಿ ಪಿತ್ರಾರ್ಜಿತ ಆಸ್ತಿ ಹೊಂದಿದ್ದ ಎಫ್‌.ಎ. ಮೋಹನ್‌ ಎಂಬುವರು ಅದನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಯಲಹಂಕ ತಹಶೀಲ್ದಾರ್ ಕಚೇರಿಗೆ 2012ರಲ್ಲಿ ಬಂದಿದ್ದರು.

ಶಿರಸ್ತೇದಾರ್‌ ಕೆ. ವೆಂಕಟೇಶ್‌ ಖಾತೆ ಮಾಡಿಕೊಡಲು ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದನ್ನು ತಮ್ಮ ಕಚೇರಿಯ ಲಿಫ್ಟ್‌ ಆಪರೇಟರ್‌ ನಾಗರಾಜ್‌ ಎಂಬುವವರಿಗೆ ತಲುಪಿಸುವಂತೆ ತಿಳಿಸಿದ್ದರು. ಅದರಂತೆ ಅಷ್ಟೂ ಹಣವನ್ನು ನಾಗರಾಜ್‌ಗೆಮೋಹನ್‌ ತಲುಪಿಸಿದ್ದರು. ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆ ಬೀಸಿದ್ದರು. ಗಾಬರಿಯಾದ ಲಿಫ್ಟ್‌ ಆಪರೇಟರ್‌ ಹಣವನ್ನು ಕೆಳಗೆ ಎಸೆದಿದ್ದ.

ADVERTISEMENT

ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಹೆಗಡೆ ಸೋಮವಾರ ಶಿಕ್ಷೆ ಪ್ರಕಟಿಸಿದರು.‍ಪ್ರಾಸಿಕ್ಯೂಷನ್‌ ಪರ ಪಿ.ಆರ್‌. ಹೊಸಳ್ಳಿಮಠ ವಾದಿಸಿದ್ದರು.

ದ್ವಿತೀಯದರ್ಜೆ ಸಹಾಯಕನಿಗೂ ಶಿಕ್ಷೆ
ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದ್ದ ರೈತರೊಬ್ಬರಿಂದ ₹ 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್‌ ಕಚೇರಿ ದ್ವಿತಿಯ ದರ್ಜೆ ಸಹಾಯಕ ವೆಂಕಟಾಚಲ ಎಂಬುವರಿಗೆ ಇಲ್ಲಿನ 9ನೇ ಹೆಚ್ಚುವರಿ ನ್ಯಾಯಾಲಯ ನಾಲ್ಕು ವರ್ಷ ಜೈಲು ಮತ್ತು ₹ 15 ಸಾವಿರ ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಹೆಸರಘಟ್ಟ ಹೋಬಳಿ ಮಾರಸಂದ್ರದ ನಿವಾಸಿ ಕೃಷ್ಣಪ್ಪ, ಅಕ್ರಮ ಸಕ್ರಮದಡಿ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಿಕೊಡಲು ವೆಂಕಟಾಚಲ ₹10 ಸಾವಿರ ಲಂಚ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಕೃಷ್ಣಪ್ಪ ಎರಡು ಕಂತುಗಳಲ್ಲಿ ಕೊಡುವುದಾಗಿ ತಿಳಿಸಿ, ₹ 5 ಸಾವಿರ ನೀಡಿದ್ದರು. ಉಳಿದ ಐದು ಸಾವಿರ ಕೊಡುವಂತೆ ಆರೋಪಿ ಪಟ್ಟು ಹಿಡಿದಾಗ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಫಿರ್ಯಾದಿಯಿಂದ ಆರೋಪಿ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಪ್ರಕರಣದ ವಿಚಾರಣೆ ನಡೆಸಿದ 9ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ವಿಜಯಾನಂದ ಅವರು ಆರೋಪಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಜೈಲು ಶಿಕ್ಷೆ ಪ್ರಕಟಿಸಿದರು. ಪ್ರಾಸಿಕ್ಯೂಷನ್‌ ಪರ ಕೆ. ಮಹಾಲಕ್ಷ್ಮಿ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.