ADVERTISEMENT

ಶಿವಸೇನೆ ಮಾಜಿ ಶಾಸಕ ಭಗವಾನ್‌ ವಿರುದ್ಧ ಅತ್ಯಾಚಾರ ಆರೋಪ ಬೆಂಗಳೂರಿನಲ್ಲಿ FIR

ಅತ್ಯಾಚಾರ, ಕೊಲೆ ಬೆದರಿಕೆ ಆರೋಪ, ನೋಟಿಸ್ ಜಾರಿಗೆ ಪೊಲೀಸರ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 23:30 IST
Last Updated 18 ಆಗಸ್ಟ್ 2025, 23:30 IST
ಭಗವಾನ್‌ ಶರ್ಮಾ
ಭಗವಾನ್‌ ಶರ್ಮಾ   

ಬೆಂಗಳೂರು/ದೇವನಹಳ್ಳಿ: ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಆರೋಪದಡಿ ಉತ್ತರಪ್ರದೇಶದ ಶಿವಸೇನೆಯ ಮಾಜಿ ಶಾಸಕ ಭಗವಾನ್‌ ಶರ್ಮಾ ವಿರುದ್ಧ ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ (ಬಿಐಎಎಲ್‌) ಭಾನುವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ.‌

ಉತ್ತರಪ್ರದೇಶದ 40 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಮಾಜಿ ಶಾಸಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್‌ 69ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮದುವೆ ಆಗುವುದಾಗಿ ನಂಬಿಸಿ ಆಗಸ್ಟ್ 14ರಂದು ಭಗವಾನ್ ಶರ್ಮಾ ಅವರು ದೂರುದಾರೆ ಹಾಗೂ ಅವರ ಎಂಟು ವರ್ಷದ ಪುತ್ರನನ್ನು ಬೆಂಗಳೂರಿನ ವಿಮಾನ ನಿಲ್ದಾಣದ ಸಮೀಪದ ಹೋಟೆಲ್‌ವೊಂದಕ್ಕೆ ಕರೆದುಕೊಂಡು ಬಂದಿದ್ದರು. ಸಂತ್ರಸ್ತೆಯನ್ನು ನಗರದ ಹಲವು ಕಡೆ ಸುತ್ತಾಡಿಸಿದ್ದರು. ಆಗಸ್ಟ್‌ 16ರಂದು ಚಿತ್ರದುರ್ಗಕ್ಕೆ ಕರೆದೊಯ್ದು ನಂತರ ವಾಪಸ್‌ ಕರೆದುಕೊಂಡು ಬಂದಿದ್ದರು. ಮತ್ತೆ ಅದೇ ಹೋಟೆಲ್‌ನಲ್ಲಿ ಕೊಠಡಿ ಪಡೆದಿದ್ದರು. ಅವರ ಜತೆಗೆ ಫೋಟೊ ತೆಗೆದುಕೊಂಡು, ದೂರುದಾರೆಯ ಮೇಲೆ ಅತ್ಯಾಚಾರ ಎಸಗಿದ್ದರು. ನಂತರ ಕೊಲೆ ಬೆದರಿಕೆ ಹಾಕಿ ಪರಾರಿ ಆಗಿದ್ದಾರೆ’ ಎಂದು ಮಹಿಳೆ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಮದುವೆ ಆಗುವುದಾಗಿ ನಂಬಿಸಿದ್ದ ಭಗವಾನ್‌ ಶರ್ಮಾ ಅವರು 2017ರಿಂದಲೂ ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿದ್ದರು. ಆದರೆ, ಮದುವೆ ಆಗಿರಲಿಲ್ಲ. ಸಹಜೀವನ ನಡೆಸುತ್ತಿದ್ದಾಗ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಉತ್ತರಪ್ರದೇಶದ ಠಾಣೆಗೂ ಮಹಿಳೆ ದೂರು ನೀಡಿದ್ದರು. ಬೆಂಗಳೂರಿಗೆ ಬಂದಾಗಲೂ ಇಬ್ಬರ ನಡುವೆ ಗಲಾಟೆ ಆಗಿತ್ತು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಭಗವಾನ್‌ ಶರ್ಮಾ ಅವರು ಉತ್ತರಪ್ರದೇಶದ ಬುಲಂದ್‌ಶಹರ್‌ನ ದೇಬಾಯ್‌ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ವ್ಯಾಪಾರದ ಉದ್ದೇಶದಿಂದ ಆಗಸ್ಟ್‌ 14ರಂದು ಶರ್ಮಾ ಅವರು ಬೆಂಗಳೂರಿಗೆ ಬಂದಿದ್ದರು. ತಮ್ಮೊಂದಿಗೆ ಮಹಿಳೆ ಹಾಗೂ ಅವರ ಪುತ್ರನನ್ನೂ ಕರೆದುಕೊಂಡು ಬಂದಿದ್ದರು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಭಗವಾನ್ ಶರ್ಮಾ (ಗುಡ್ಡು ಪಂಡಿತ್‌) ಉತ್ತರ ಪ್ರದೇಶದ ಬುಲಂದ್‌ಶಹರ್‌ನ ದೇಬಾಯ್‌ ವಿಧಾನಸಭಾ ಕ್ಷೇತ್ರದಿಂದ ಕ್ರಮವಾಗಿ ಬಹುಜನ ಸಮಾಜವಾದಿ ಪಕ್ಷ (ಬಿಎಸ್​ಪಿ) ಮತ್ತು ಸಮಾಜವಾದಿ ಪಕ್ಷದಿಂದ(ಎಸ್‌ಪಿ) ಎರಡು ಅವಧಿಗೆ ಶಾಸಕರಾಗಿದ್ದರು. ಸದ್ಯ ಅವರು ಶಿವಸೇನಾ ಪಕ್ಷದಲ್ಲಿದ್ದಾರೆ.

ಸಂತ್ರಸ್ತ ಮಹಿಳೆ ಒಂದು ಕಡೆ ತಾನು ಶರ್ಮಾ ಹೆಂಡತಿ ಎಂದು ಹೇಳಿಕೊಂಡಿದ್ದಾಳೆ. ಪರಸ್ಪರ ರಾಜಿ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದಾಗಿ ಇಬ್ಬರೂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.