ಆರೋಪಿ ಕೃತ್ಯದಿಂದ ವಿರೂಪಗೊಂಡಿರುವ ಶಿವಕುಮಾರ ಸ್ವಾಮೀಜಿ ಪುತ್ಥಳಿ
ಬೆಂಗಳೂರು: ವೀರಭದ್ರನಗರ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿರುವ ತುಮಕೂರು ಸಿದ್ದಗಂಗಾ ಮಠದ ಹಿಂದಿನ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ವಿರೂಪಗೊಳಿಸಿದ್ದ ಆರೋಪದ ಅಡಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಗಿರಿನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯ ಭರತ್‌ನಗರ ನಿವಾಸಿ ಶಿವಕೃಷ್ಣ (34) ಬಂಧಿತ.
‘ಐದು ವರ್ಷಗಳ ಹಿಂದೆ ಜಯ ಕರ್ನಾಟಕ ಜನಪರ ವೇದಿಕೆ ವೀರಭದ್ರನಗರದ ಬಸ್ ನಿಲ್ದಾಣದ ಬಳಿ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಿಸಿತ್ತು. ಈ ಪುತ್ಥಳಿಯನ್ನು ವೇದಿಕೆ ಸದಸ್ಯರೇ ನಿರ್ವಹಣೆ ಮಾಡುತ್ತಿದ್ದಾರೆ. ನ.30ರಂದು ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿ, ಪುತ್ಥಳಿ ವಿರೂಪಗೊಳಿಸಿ ಪರಾರಿ ಆಗಿದ್ದ. ಸಂಘಟನೆ ಅಧ್ಯಕ್ಷ ಪರಮೇಶ್ ಅವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.
‘ಕೆಲವು ದಿನಗಳ ಹಿಂದೆ ಫುಡ್ ಡೆಲಿವರಿ ಮಾಡಲು ಗಿರಿನಗರದ ವೀರಭದ್ರನಗರಕ್ಕೆ ಹೋಗಿದ್ದ ವೇಳೆ ಪುತ್ಥಳಿ ಇರುವುದನ್ನು ಆರೋಪಿ ಗಮನಿಸಿದ್ದ. ನ.30ರಂದು ತಡ ರಾತ್ರಿ ಅದೇ ಜಾಗಕ್ಕೆ ಬಂದು ಪುತ್ಥಳಿ ವಿರೂಪಗೊಳಿಸಿ ಪರಾರಿ ಆಗಿದ್ದ. ವಿರೂಪಗೊಳಿಸುವ ಉದ್ದೇಶದಿಂದ ಮನೆಗೆ ಹೋಗಿ ಸುತ್ತಿಗೆ ಸಹ ತಂದಿದ್ದ’ ಎಂದು ಮೂಲಗಳು ತಿಳಿಸಿವೆ.
‘ಏಳು ವರ್ಷಗಳ ಹಿಂದೆ ಶಿವಕೃಷ್ಣ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಆರೋಪಿ ಅವಿವಾಹಿತನಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾನೆ’ ಎಂದು ಮೂಲಗಳು ಹೇಳಿವೆ.
‘ಕೃತ್ಯ ಎಸಗಿದ ಬಳಿಕ ತನ್ನ ಮನೆಯ ಎದುರು ಧಾರ್ಮಿಕ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬ್ಯಾನರ್‌ಗಳನ್ನೂ ಹರಿದು, ಕಲ್ಲು ಎಸೆದಿದ್ದ’ ಎಂದು ಪೊಲೀಸರು ತಿಳಿಸಿದರು. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಖಂಡಿಸಿ ಪ್ರತಿಭಟನೆ: ಘಟನೆ ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ನಗರ ಘಟಕದಿಂದ ಗುರುವಾರ ಪ್ರತಿಭಟನೆ ನಡೆಯಿತು.
‘ಶಿವಕುಮಾರ ಸ್ವಾಮೀಜಿ ಅವರು ಜಾತಿ, ಮತ ಮತ್ತು ಪಂಥ ಭೇದವಿಲ್ಲದೇ ಎಲ್ಲರಿಗೂ ಅನ್ನ, ಅಕ್ಷರ, ಆಶ್ರಯ ನೀಡಿದ್ದರು. ಅವರ ನಿಸ್ವಾರ್ಥ ಸೇವೆ ನೋಡಿದ ಭಕ್ತರೇ ಅವರಿಗೆ ನಡೆದಾಡುವ ದೇವರು ಎಂಬ ಬಿರುದು ನೀಡಿದ್ದರು. ಸಮಾಜದಲ್ಲಿ ಅಶಾಂತಿ ಮೂಡಿಸಲು ಕೆಲವು ಕಿಡಿಗೇಡಿಗಳು ಇಂತಹ ಕೃತ್ಯ ಎಸಗುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.
ಮಾಜಿ ಉಪ ಮೇಯರ್ ಬಿ.ಎಸ್.ಪುಟ್ಟರಾಜು, ವೀರಶೈವ ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡರಾದ ಎಚ್.ಆರ್.ಮಲ್ಲಿಕಾರ್ಜುನ್ ,ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಘಟಕದ ಅಧ್ಯಕ್ಷ ಬಿ.ಆರ್.ನವೀನ್ ಕುಮಾರ್, ಉಪಾಧ್ಯಕ್ಷ ಗುರುಮೂರ್ತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
‘ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ವಿರೂಪಗೊಳಿಸಿರುವುದು ದುರದೃಷ್ಟಕರ ಹಾಗೂ ಆಘಾತಕಾರಿ ಘಟನೆ. ಶಾಂತಿ ಕರುಣೆ ಮತ್ತು ಜಾತ್ಯತೀತ ಮೌಲ್ಯಗಳ ಸಂಕೇತವಾಗಿ ಪೂಜಿಸಲ್ಪಟ್ಟ ಸ್ವಾಮೀಜಿ ಅಸಂಖ್ಯಾತ ವ್ಯಕ್ತಿಗಳಿಗೆ ಸ್ಪೂರ್ತಿ ಆಗಿದ್ದಾರೆ’ ಎಂದು ಬೆಂಗಳೂರು ಆರ್ಚ್ ಬಿಷಪ್ ಪೀಟರ್ ಮಚಾಡೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರಭು ಏಸು ಕ್ರಿಸ್ತರನ್ನೊಳಗೊಂಡ ಕನಸಿನಿಂದ ತಾನು ಪ್ರೇರೇಪಿಸಲ್ಪಟ್ಟಿದ್ದೇನೆ’ ಎಂದು ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂಬುದು ವರದಿಯಾಗಿದೆ. ಆತನ ತಪ್ಪೊಪ್ಪಿಗೆಯು ಆಧಾರರಹಿತ ಹಾಗೂ ಭಯಾನಕವಾಗಿದೆ. ಇಂತಹ ಹೇಳಿಕೆಗಳು ಧರ್ಮನಿಂದನೆಯಷ್ಟೇ ಮಾತ್ರವಲ್ಲ ಸಮಾಜದಲ್ಲಿ ಅಶಾಂತಿ ವೈಷಮ್ಯ ಬಿತ್ತುವ ಹಾಗೂ ಕೋಮುಗಲಭೆ ಸೃಷ್ಟಿಸುವ ಪ್ರಯತ್ನದಂತಿದೆ’ ಎಂದು ತಿಳಿಸಿದ್ದಾರೆ.
‘ಘಟನೆ ಕುರಿತು ಪೊಲೀಸರು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದೂ ಅವರೂ ಆಗ್ರಹಿಸಿದ್ದಾರೆ. ‘ಗಿರಿನಗರದ ಜನರು ಶಾಂತಿ ಕಾಪಾಡಬೇಕು. ಸಮಾಜದ ಶಾಂತಿಗೆ ಭಂಗ ತರುವ ಇಂತಹ ಯಾವುದೇ ಪ್ರಚೋದನಕಾರಿ ಕ್ರಮಗಳಿಗೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.