
ಬೆಂಗಳೂರು: ‘ಒಂದೇ ಧರ್ಮಕ್ಕೆ ಸೀಮಿತವಾಗದೇ ಆಡಳಿತ ನಡೆಸಿದ ಶಿವಾಜಿ ಮಹಾರಾಜರ ಹೆಸರನ್ನು ಕೇಸರೀಕರಣಗೊಳಿಸಿ ರಾಜಕಾರಣ ಮಾಡುವುದು ಸರಿಯಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿವಾಜಿ ಮಹಾರಾಜರ ಆಡಳಿತ ಅವಧಿಯಲ್ಲಿ ಎಲ್ಲ ಧರ್ಮದವರಿಗೂ ಧಾರ್ಮಿಕ ಸ್ವಾತಂತ್ರ್ಯ ಇತ್ತು. ರಾಜರಾಗಿ ಅವರು ಎಲ್ಲ ಧರ್ಮಗಳ ಪರ ನಿಂತಿದ್ದರು. ಸರ್ವ- ಧರ್ಮ ಸಹಿಷ್ಣುತೆಗೆ ಶಿವಾಜಿಯ ಆಡಳಿತ ಮಾದರಿಯಾಗಿತ್ತು. ಎಲ್ಲ ಸಮುದಾಯದ ಗೌರವಾನ್ವಿತ ವ್ಯಕ್ತಿಗಳನ್ನು ತಮ್ಮ ಆಡಳಿತದಲ್ಲಿ ತೊಡಗಿಸಿದ್ದರು’ ಎಂದು ಹೇಳಿದರು.
‘ಶಿವಾಜಿ ಅವರು ಕರ್ನಾಟಕ ಭಾಷೆ ಹಾಗೂ ರಾಜ್ಯದ ಮೇಲೆ ಅಪಾರವಾದ ಪ್ರೇಮವನ್ನಿರಿಸಿಕೊಂಡಿದ್ದರು. ವಿಜಯನಗರ ಸಾಮ್ರಾಜ್ಯ ಪತನವೇಳೆ ಅದರ ಅವಶೇಷಗಳನ್ನು ಕಂಡು, ಔರಂಗಜೇಬನ ವಿರುದ್ಧ ಧಿಕ್ಕಾರ ಕೂಗಿದ್ದರು. ಅವರ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು’ ಎಂದು ತಿಳಿಸಿದರು.
ಸಂಭಾಜಿ ಸಮಾಧಿ: ‘ಶಿವಾಜಿ ಪುತ್ರ ಸಂಭಾಜಿ ಅವರ ಸಮಾಧಿ ಕನಕಗಿರಿ ಕ್ಷೇತ್ರದ ಖಾಸಗಿ ಸ್ಥಳದಲ್ಲಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ತೊಡಕನ್ನು ಬಗೆಹರಿಸಿಕೊಂಡು ಸಮಾಧಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಿವರಾಜ್ ತಂಗಡಗಿ ಹೇಳಿದರು.
ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಮರಿಯೋಜಿರಾವ್, ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಪಾಗೋಜಿ, ಕರ್ನಾಟಕ ಮರಾಠ ಸಮಾಜದ ರಾಜ್ಯಾಧ್ಯಕ್ಷ ಎಸ್.ಸುರೇಶ್ ರಾವ್ ಸಾಠೆ, ಮರಾಠ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಸುನೀಲ್ ರಾವ್ ಭಿಸ್ಸೆ, ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.