ADVERTISEMENT

ಬದುಕನ್ನು ಬೀದಿಗೆ ತರುತ್ತಿರುವ ಬಿಡಿಎ‌:

ಶಿವರಾಮ ಕಾರಂತ ಬಡಾವಣೆಗಾಗಿ ಮನೆ ಕಳೆದುಕೊಳ್ಳುತ್ತಿರುವವರ ಅಳಲು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 22:25 IST
Last Updated 7 ಆಗಸ್ಟ್ 2021, 22:25 IST
ದೊಡ್ಡ ಬೆಟ್ಟಹಳ್ಳಿಯಲ್ಲಿ ನಿರ್ಮಿಸಿದ್ದ ಮನೆಗಳನ್ನು ಬಿಡಿಎ ತೆರವುಗೊಳಿಸಿರುವುದು
ದೊಡ್ಡ ಬೆಟ್ಟಹಳ್ಳಿಯಲ್ಲಿ ನಿರ್ಮಿಸಿದ್ದ ಮನೆಗಳನ್ನು ಬಿಡಿಎ ತೆರವುಗೊಳಿಸಿರುವುದು   

ಬೆಂಗಳೂರು: ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಮ್ಮ ಬದುಕನ್ನು ಬೀದಿಗೆ ತರುತ್ತಿದೆ. ಸ್ವಂತ ಜಾಗದಲ್ಲಿಯೇ ಮನೆ ಕಟ್ಟಿಕೊಂಡಿದ್ದರೂ ನ್ಯಾಯಾಲಯದ ಆದೇಶದ ನೆಪ ಇಟ್ಟುಕೊಂಡು ಮನೆಗಳನ್ನು ಧ್ವಂಸಗೊಳಿಸುತ್ತಿದ್ದಾರೆ’ ಎಂದು ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನಕ್ಕಾಗಿ ಮನೆಗಳನ್ನು ಕಳೆದುಕೊಳ್ಳುತ್ತಿರುವ ಸಂತ್ರಸ್ತರು ದೂರಿದರು.

‘ದೊಡ್ಡ ಬೆಟ್ಟಹಳ್ಳಿಯಲ್ಲಿ ಶನಿವಾರ ಒಂದೇ ದಿನ 10 ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿಯವರ ಮೂರು ಮನೆಗಳೂ ಇವೆ’ ಎಂದು ಸಂತ್ರಸ್ತರಾದ ಶಾರದಮ್ಮ, ಜಯಮ್ಮ, ಶೈಲಾ ಮತ್ತಿತರರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಗಾಣಿಗರಹಳ್ಳಿ, ಲಕ್ಷ್ಮೀಪುರ, ಸೋಮಶೆಟ್ಟಿಹಳ್ಳಿಯಲ್ಲಿ 15 ದಿನಗಳ ಹಿಂದೆ 20ಕ್ಕೂ ಅಧಿಕ ಮನೆಗಳನ್ನು ಒಡೆದಿದ್ದಾರೆ. ಉತ್ತರ ಭಾರತದವರು ಸೇರಿದಂತೆ ಶ್ರೀಮಂತರಿಗೆ ಮನೆ ಕಟ್ಟಿಕೊಡುವ ಉದ್ದೇಶದಿಂದ ಬಡವರ, ಕೃಷಿಕರ ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ರಮೇಶ್‌ ರಾಮಗೊಂಡನಹಳ್ಳಿ ಆರೋಪಿಸಿದರು.

ADVERTISEMENT

‘ಸುಪ್ರೀಂ ಕೋರ್ಟ್ ಆದೇಶ ಇದೆ ಎಂಬುದು ನೆಪ ಮಾತ್ರ. ಬಿಡಿಎ ಅಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಇಂತಹ ಆದೇಶ ಬರುವಂತೆ ಮಾಡಿದ್ದಾರೆ’ ಎಂದು ದೂರಿದರು.

‘ಈ ಹಳ್ಳಿಗಳು ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಈ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್. ಈಗ ಬಿಡಿಎ ಅಧ್ಯಕ್ಷರೂ ಆಗಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶ ಬಂದ ನಂತರವೂ, ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಯಾವುದೇ ಮನೆಗಳನ್ನು ಕೆಡವಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಬಿಡಿಎ ಅಧ್ಯಕ್ಷರಾದ ನಂತರ, ನ್ಯಾಯಾಲಯದ ಆದೇಶ ಪಾಲಿಸಲೇಬೇಕು ಎಂದು ಹೇಳುತ್ತಾ ಮನೆಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಶಿವರಾಮ ಕಾರಂತ ಬಡಾವಣೆಗೆ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿರುವ ಆರು ಹಳ್ಳಿಗಳು ಮಾವಳ್ಳಿಪುರಕ್ಕೆ ಹೊಂದಿಕೊಂಡಂತಿವೆ. ನಗರದ ತ್ಯಾಜ್ಯವನ್ನೆಲ್ಲ ಇಲ್ಲಿ ತಂದು ಸುರಿದಿದ್ದರ ದುಷ್ಪರಿಣಾಮವನ್ನು ಜನ ಇಲ್ಲಿಯವರೆಗೂ ಅನುಭವಿಸಿದ್ದರು. ಕಸ ಸುರಿಯುವುದನ್ನು ನಿಲ್ಲಿಸಿ ಏಳು ವರ್ಷಗಳೇ ಆಗಿದ್ದರೂ ಅದರ ಪರಿಣಾಮ ಕಡಿಮೆಯಾಗಿರಲಿಲ್ಲ. ಇತ್ತೀಚಿಗಷ್ಟೇ ಕೃಷಿ ಚಟುವಟಿಕೆಯನ್ನು ಮತ್ತೆ ಪ್ರಾರಂಭಿಸಿದ್ದರು. ಈಗ ಗಾಯದ ಮೇಲೆ ಬರೆ ಎಳೆದಂತೆ ಬಡಾವಣೆಗಾಗಿ ಕೃಷಿ ಜಮೀನನ್ನೇ ವಶಪಡಿಸಿಕೊಳ್ಳಲಾಗುತ್ತಿದೆ’ ಎಂದರು.

‘ಪರಿಶಿಷ್ಟ ಜಾತಿಗೆ ಸೇರಿದ ಜಯಮ್ಮ ಎಂಬುವರ ಮನೆ ಧ್ವಂಸ ಮಾಡಿದ್ದಾರೆ. ಇದನ್ನು ವಿರೋಧಿಸಿದ್ದಕ್ಕೆ ಅವರ ಇಬ್ಬರು ಸಂಬಂಧಿಕರು ಮತ್ತು ಇನ್ನಿಬ್ಬರನ್ನು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.