ADVERTISEMENT

ಶಿವಲೀಲಾ ಸಿನಿಮಾಗೆ ಚಿತ್ರಮಂದಿರಗಳ ಕೊರತೆ: ಸಿ.ಎಂ ನಿವಾಸಕ್ಕೆ ಮುತ್ತಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 15:31 IST
Last Updated 11 ಜನವರಿ 2026, 15:31 IST
   

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಕಥೆಯನ್ನು ಹೊಂದಿರುವ ‘ಶಿವಲೀಲಾ’ ಸಿನಿಮಾಗೆ ಚಿತ್ರಮಂದಿರಗಳನ್ನು ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಚಿತ್ರತಂಡದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಮನವಿ ಸ್ವೀಕರಿಸಲು ಯಾರೂ ಬಾರದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಕಲಾವಿದರು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಸಿಎಆರ್‌ ಕೇಂದ್ರಕ್ಕೆ ಬಸ್‌ನಲ್ಲಿ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದರು.

‘ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಾಮಾನ್ಯರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕುವ ಬಲವಾದ ಪ್ರಯತ್ನವಿದು. ರಾಜ್ಯದ ಮೂರು ಚಿತ್ರಮಂದಿರಗಳಲ್ಲಿ ತಲಾ ಒಂದು ಪ್ರದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಶಾಲಾ, ಕಾಲೇಜು ಮಕ್ಕಳು ಕಡ್ಡಾಯವಾಗಿ ಈ ಚಿತ್ರ ನೋಡಲು ಸುತ್ತೋಲೆ ಹೊರಡಿಸಬೇಕು’ ಎಂದು ಚಿತ್ರದ ನಿರ್ದೇಶಕ ಅಶೋಕ್ ಜೈರಾಮ್ ಸರ್ಕಾರವನ್ನು ಆಗ್ರಹಿಸಿದರು.

ADVERTISEMENT

ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಜೀವನ ನರಕವಾಗಿದೆ. ಮನೆಯಲ್ಲೂ ಅವರನ್ನು ಸೇರಿಸುವುದಿಲ್ಲ. ಅವರು ಎಲ್ಲಿ ಬದುಕಬೇಕು? ಅವರ ಜೀವನ ಕುರಿತ ಚಿತ್ರ ವೀಕ್ಷಿಸಲು ಚಿತ್ರಮಂದಿರ ಕೊಡುತ್ತಿಲ್ಲ. ಈ ಸಂಬಂಧ ಸರ್ಕಾರವೇ ಸುತ್ತೋಲೆ ಹೊರಡಿಸಿ, ಮಕ್ಕಳು, ಪೋಷಕರು, ಸರ್ಕಾರಿ ನೌಕರರು ವೀಕ್ಷಿಸಲು ಅವಕಾಶ ಕೊಡಬೇಕು’ ಎಂದರು.

‘ಮನೆ, ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್‌ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಕಾನೂನು ಬದಲಾವಣೆ ಮಾಡಿಯಾದರೂ ಮೀಸಲಾತಿ ನೀಡಿ, ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿ ಕೊಡಬೇಕು’ ಎಂದರು.

ಬಿಜೆಪಿ ಮುಖಂಡರಾದ ವೈ. ಸಂಪಂಗಿ, ಮಂಜುಳಾ ಹಾಗೂ ಜಾನಪದ ಕಲಾವಿದೆ ಜೋಗತಿ ಮಂಜಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.