ADVERTISEMENT

ಮಳಿಗೆಗಳಲ್ಲಿ ಪಾಲನೆ ಆಗದ ಕೋವಿಡ್‌ ನಿಯಮ: ಬಿಬಿಎಂಪಿ ಮುಖ್ಯ ಆಯುಕ್ತ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 21:56 IST
Last Updated 4 ಆಗಸ್ಟ್ 2021, 21:56 IST
   

ಬೆಂಗಳೂರು: ನಗರದ ಬಹುತೇಕ ವ್ಯಾಪಾರ ಮಳಿಗೆಗಳಲ್ಲಿ ಕೋವಿಡ್‌ ನಿಯಂತ್ರಣ ಕ್ರಮಗಳು ಕಟ್ಟುನಿಟ್ಟಾಗಿ ಪಾಲನೆ ಆಗದ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅಸಮಾಧಾನ ವ್ಯಕ್ತಪಡಿಸಿದರು.

ವರ್ತಕರ ಸಂಘಟನೆಗಳ ಪ್ರತಿನಿಧಿಗಳ ಜೊತೆ ಅವರು ಬುಧವಾರ ಸಭೆ ನಡೆಸಿದ ಅವರು ಕೋವಿಡ್‌ ನಿಯಂತ್ರಣಕ್ಕೆ ಸಹಕರಿಸದಿದ್ದರೆ ದಂಡ ವಿಧಿಸುವುದು ಅನಿವಾರ್ಯ ಎಂದು ಎಚ್ಚರಿಕೆಯನ್ನೂ ನೀಡಿದರು.

‘ವರ್ತಕರ ಜೀವನೋಪಾಯಕ್ಕೆ ಸಮಸ್ಯೆ ಆಗಬಾರದೆಂದು ಸರ್ಕಾರ ಲಾಕ್‌ಡೌನ್‌ ಸಡಿಲಗೊಳಿಸಿ ವ್ಯಾಪಾರ ವಹಿವಾಟುಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಸಾಕಷ್ಟು ಪ್ರದೇಶಗಳಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ. ತಮ್ಮ ಮಳಿಗೆಗಳಲ್ಲಿ ಕೋವಿಡ್ ನಿಯಂತ್ರಣ ನಿಯಮಗಳು ಕಡ್ಡಾಯವಾಗಿ ಪಾಲನೆ ಆಗುವಂತೆ ನೋಡಿಕೊಳ್ಳುವುದು ಆಯಾ ವರ್ತಕರ ಹೊಣೆ’ ಎಂದು ನೆನಪಿಸಿದರು.

ADVERTISEMENT

‘ಕೋವಿಡ್ ನಿಯಗಳನ್ನು ಪಾಲಿಸದಿದ್ದರೆ ಬಿಬಿಎಂಪಿಯ ಮಾರ್ಷಲ್‌ಗಳು, ಗೃಹರಕ್ಷಕ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮುಲಾಜಿಲ್ಲದೇ ದಂಡ ವಿಧಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

‘ಮಳಿಗೆಗೆ ಬರುವ ಗ್ರಾಹಕರು ಹಾಗೂ ಕೆಲಸ ಮಾಡುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಮಳಿಗೆಯಲ್ಲಿ ಉಚಿತ ಬಳಕೆಗೆ ಸ್ಯಾನಿಟೈಸರ್ ಇಟ್ಟಿರಬೇಕು’ ಎಂದು ಸೂಚಿಸಿದರು.

‘ಮಳಿಗೆಗಳ ಸಿಬ್ಬಂದಿಗೆ ಎಲ್ಲರೂ ಲಸಿಕೆ ಹಾಕಿಸಬೇಕು. ಅವರಿಗೆ ಆಗಾಗ ಕೋವಿಡ್ ಪರೀಕ್ಷೆ ಮಾಡಿಸಬೇಕು. ಅವರಲ್ಲಿ ಯಾರಿಗಾದರೂ ಸೋಂಕಿನ ಲಕ್ಷಣಗಳಿದ್ದರೆ ಕೂಡಲೇ ಪ್ರತ್ಯೇಕ ವಾಸಕ್ಕೆ ಒಳಪಡಿಸಿ, ತಕ್ಷಣವೇ ಕೋವಿಡ್‌ ಪರೀಕ್ಷೆ ಮಾಡಿಸಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ವಿಶೇಷ ಆಯುಕ್ತ (ಆರೋಗ್ಯ) ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ನೆರೆರಾಜ್ಯದ ಪ್ರಯಾಣಿಕರಲ್ಲಿ ಕಾಣಿಸದ ಕೋವಿಡ್‌

ಬಿಬಿಎಂಪಿಯು ಕೇರಳ ಹಾಗೂ ಮಹಾರಾಷ್ಟ್ರದಿಂದ ನಗರಕ್ಕೆ ಬಂದಿರುವ 504 ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಬುಧವಾರ ಒಳಪಡಿಸಿದೆ. ಇವರಲ್ಲಿ ಯಾರಿಗೂ ಕೋವಿಡ್‌ ಪತ್ತೆಯಾಗಿಲ್ಲ.

‘ಮಹಾರಾಷ್ಟ್ರದಿಂದ ಬಂದ 270 ಮಂದಿ ಹಾಗೂ ಕೇರಳದಿಂದ ಬಂದ 234 ಮಂದಿ 72 ಗಂಟೆಗಳಿಂದ ಈಚೆಗೆ ಕೋವಿಡ್‌ ಪರೀಕ್ಷೆ ನಡೆಸಿದ ವರದಿಯನ್ನು ತಮ್ಮೊಂದಿಗೆ ತಂದಿರಲಿಲ್ಲ. ಅವರನ್ನು ಬಿಬಿಎಂಪಿಯ ವಿಶೇಷ ತಂಡಗಳು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಿದ್ದು, ಯಾರೂ ಸೋಂಕು ಹೊಂದಿರಲಿಲ್ಲ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇರಳದಿಂದ ನಗರಕ್ಕೆ ಬಂದಿದ್ದ 43 ಮಂದಿ ಆರ್‌ಟಿಪಿಸಿಆರ್‌ ಪರೀಕ್ಷಾ ವರದಿಯನ್ನು ತಮ್ಮೊಂದಿಗೆ ತಂದಿದ್ದರು. ಅವರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿಲ್ಲ.

ನಗರದ ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣ ಹಾಗೂ ಅಂತರರಾಜ್ಯಗಳ ನಡುವೆ ಸಂಚರಿಸುವ ಬಸ್‌ಗಳು ಬಂದು ನಿಲ್ಲುವ ಬಸ್‌ ನಿಲ್ದಾಣಗಳಲ್ಲಿ ಬಿಬಿಎಂಪಿ ತಪಾಸಣಾ ತಂಡಗಳನ್ನು ನಿಯೋಜಿಸಿದೆ. ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿಂದ ಬರುವ ಪ್ರಯಾಣಿಕರ ಮೇಲೆ ಬಿಬಿಎಂಪಿಯ ತಂಡಗಳು ವಿಶೇಷ ನಿಗಾ ಇಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.