ADVERTISEMENT

ಕನ್ನಡ ನಾಮಫಲಕ ಅಳವಡಿಸಿಕೊಳ್ಳದ ಅಂಗಡಿಗಳಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 0:07 IST
Last Updated 17 ಫೆಬ್ರುವರಿ 2024, 0:07 IST
ಬ್ರಿಗೇಡ್‌ ರಸ್ತೆಯಲ್ಲಿರುವ ಕೆಲವು ಮಳಿಗೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಸದ್ದರಿಂದ ಮಳಿಗೆಗಳನ್ನು ಬಿಬಿಎಂಪಿ ವತಿಯಿಂದ ಮುಚ್ಚಿಸಲಾಗಿದೆ.
ಬ್ರಿಗೇಡ್‌ ರಸ್ತೆಯಲ್ಲಿರುವ ಕೆಲವು ಮಳಿಗೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಸದ್ದರಿಂದ ಮಳಿಗೆಗಳನ್ನು ಬಿಬಿಎಂಪಿ ವತಿಯಿಂದ ಮುಚ್ಚಿಸಲಾಗಿದೆ.   

ಬೆಂಗಳೂರು: ಮಳಿಗೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಸದ 18 ಉದ್ದಿಮೆಗಳನ್ನು ತಾತ್ಕಾಲಿಕವಾಗಿ ಬಿಬಿಎಂಪಿ ವತಿಯಿಂದ ಮುಚ್ಚಿಸಲಾಗಿದೆ.

ಬ್ರಿಗೇಡ್ ರಸ್ತೆ, ಎಂ.ಜಿ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ಗಳಲ್ಲಿ ಕನ್ನಡ ನಾಮಫಲಕ ಬಳಸದ ಅಂಗಡಿಗಳಿಗೆ ಬಿಬಿಎಂಪಿ ಪೂರ್ವ ವಲಯದ ಸಿಬ್ಬಂದಿ ಎಚ್ಚರಿಕೆ ನೀಡಿದರು. ಈಗಿರುವ ನಾಮಫಲಕಗಳಲ್ಲಿ ಇಂಗ್ಲಿಷ್‌ ಅಕ್ಷರಗಳನ್ನು ಮುಚ್ಚಿ, ಕನ್ನಡವನ್ನು ಚಿಕ್ಕದಾಗಿ ಕಾಣುವಂತೆ ಕೆಲವು ಮಾಡಿದ್ದಾರೆ. ಇದು ಸರಿಯಲ್ಲ. ಶೇ 60ರಷ್ಟು ಕನ್ನಡ ಇರಲೇಬೇಕು ಎಂದು ಮಳಿಗೆಯವರಿಗೆ ತಾಕೀತು ಮಾಡಿದರು.

ವಲಯ ಆಯುಕ್ತೆ ಸ್ನೇಹಲ್, ವಲಯ ಜಂಟಿ ಆಯುಕ್ತೆ ಪಲ್ಲವಿ ಅವರ ನಿರ್ದೇಶನದಂತೆ ಶಾಂತಿನಗರ ಹಾಗೂ ಸಿ.ವಿ ರಾಮನ್‌ನಗರ ವ್ಯಾಪ್ತಿಯಲ್ಲಿ ವಲಯ ಆರೋಗ್ಯಾಧಿಕಾರಿ ಡಾ. ಸವಿತಾ ನೇತೃತ್ವದಲ್ಲಿ ಮಳಿಗೆಗಳ ನಾಮಫಲಕಗಳನ್ನು ಪರಿಶೀಲಿಸಿದರು.

ADVERTISEMENT

ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ವಾಣಿಜ್ಯ ಮಳಿಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 170ಕ್ಕೂ ಹೆಚ್ಚು ಮಳಿಗೆಗಳಲ್ಲಿ ಈಗಾಗಲೇ ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಂಡಿರುತ್ತಾರೆ. ಇನ್ನು ಕನ್ನಡ ನಾಮಫಲಕ ಅಳವಡಿಸದೇ ಇರುವ ಮಳಿಗೆಗಳ ಮಾಲೀಕರಿಗೆ ಅಂತಿಮ ತಿಳಿವಳಿಕೆ ಪತ್ರ ನೀಡಿ ಕೂಡಲೇ ನಾಮಫಲಕ ಬದಲಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.