ADVERTISEMENT

Krishna Janmashtami | ಕೃಷ್ಣ ಜನ್ಮಾಷ್ಟಮಿ: ಆರಾಧನೆಗೆ ಬೆಂಗಳೂರು ನಗರ ಸಜ್ಜು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 21:11 IST
Last Updated 29 ಆಗಸ್ಟ್ 2021, 21:11 IST
ಕೃಷ್ಣ ಜನ್ಮಾಷ್ಟಮಿ ಮುನ್ನಾದಿನವಾದ ಭಾನುವಾರ ಸಾರ್ವಜನಿಕರು ಕೆ.ಆರ್‌.ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು –ಪ್ರಜಾವಾಣಿ ಚಿತ್ರಗಳು
ಕೃಷ್ಣ ಜನ್ಮಾಷ್ಟಮಿ ಮುನ್ನಾದಿನವಾದ ಭಾನುವಾರ ಸಾರ್ವಜನಿಕರು ಕೆ.ಆರ್‌.ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಕೋವಿಡ್ ನಿರ್ಬಂಧ ದೊಂದಿಗೆ ಸೋಮವಾರ ಕೃಷ್ಣಜನ್ಮಾಷ್ಟಮಿ ಆಚರಣೆಗೆ ನಗರದ ಧಾರ್ಮಿಕ ಕೇಂದ್ರಗಳು ಹಾಗೂ ದೇವಾಲಯಗಳು ಸಿದ್ಧತೆ ಮಾಡಿಕೊಂಡಿವೆ. ವಿವಿಧ ಸಂಘ–ಸಂಸ್ಥೆಗಳು ಮಕ್ಕಳಿಗೆ ವೇಷಭೂಷಣ ಸ್ಪರ್ಧೆ, ಗಾಯನ, ನೃತ್ಯ, ಪಾರಾಯಣ, ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿವೆ.

ಇಸ್ಕಾನ್ ದೇವಸ್ಥಾನ, ಶಂಕರಪುರದ ಉತ್ತರಾದಿ ಮಠ ಸೇರಿದಂತೆ ಕೆಲವೆಡೆ ಭಾನುವಾರ ಸಹ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ ಗುಹಾಲಯ ಕ್ಷೇತ್ರ, ವಿದ್ಯಾಪೀಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳು ಹಾಗೂ ದೇವಾಲಯಗಳು ಹಬ್ಬದ ಆಚರಣೆಗೆ ಸಜ್ಜುಗೊಂಡಿವೆ. ಕೃಷ್ಣ–ರಾಧೆಯ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೋಮವಾರ ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲು ಆಡಳಿತ ಮಂಡಳಿಗಳು ಮುಂದಾಗಿವೆ.

ADVERTISEMENT

ಸಂಜಯನಗರದ ರಾಧಾಕೃಷ್ಣ ದೇವಸ್ಥಾನ, ದೊಡ್ಡ ಬೊಮ್ಮಸಂದ್ರದ ಕೃಷ್ಣ ದೇವಾಲಯ, ಇಂದಿರಾನಗರದ ಕೃಷ್ಣ ದೇವಾಲಯ, ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಕಾಡುಗೊಂಡನಹಳ್ಳಿಯ ಲಕ್ಷ್ಮೀ ನರಸಿಂಹ ಮತ್ತು ವೇಣುಗೋಪಾಲ ಸ್ವಾಮಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಇಸ್ಕಾನ್‌ ದೇವಾಲಯ ಸೇರಿದಂತೆ ನಗರದ ವಿವಿಧ ಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಗರದ ನಾಯಂಡಹಳ್ಳಿ ಬಳಿ ಮಹಿಳೆಯೊಬ್ಬರು ಕೃಷ್ಣನ ವಿಗ್ರಹವನ್ನು ಖರೀದಿಸುತ್ತಿರುವ ದೃಶ್ಯ ಭಾನುವಾರ ಕಂಡುಬಂತು.

ಪೇಜಾವರ ಮಠವು ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಯಕ್ಷಗಾನ ತಾಳಮದ್ದಲೆ ಆಯೋಜಿಸಿದೆ. ಉಡುಪಿಯ ಪುತ್ತಿಗೆ ಮಠವು ಬಸವನಗುಡಿಯ ಗೋವರ್ಧನಗಿರಿ ಗುಹಾಲಯದಲ್ಲಿ ಬೆಳಿಗ್ಗೆ 7.30ರಿಂದ ರಾತ್ರಿ 12 ಗಂಟೆಯವರೆಗೂ ವಿವಿಧ ಧಾರ್ಮಿಕ ವಿಧಿವಿಧಾನ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಜೆ 6.30ಕ್ಕೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದಾರೆ.

ಸಂಭ್ರಮಿಸಿದ ಮಕ್ಕಳು: ಕೃಷ್ಣ ಜನ್ಮಾಷ್ಟಮಿಯ ಮುನ್ನಾದಿನವಾದ ಭಾನುವಾರ ಕೂಡ ಕೆಲ ಧಾರ್ಮಿಕ ಮತ್ತು ಶೈಕ್ಷಣಿಕ ಸಂಘ–ಸಂಸ್ಥೆಗಳು ಆನ್‌ಲೈನ್ ವೇದಿಕೆಯಲ್ಲಿ ರಾಧಾ–ಕೃಷ್ಣರ ವೇಷ ಸ್ಪರ್ಧೆಯನ್ನು ಆಯೋಜಿಸಿದ್ದವು. ಪೋಷಕರು ಮಕ್ಕಳಿಗೆ ರಾಧಾ–ಕೃಷ್ಣರ ವೇಷ ತೊಡಿಸಿ, ಸಂಭ್ರಮಿಸಿದರು. ಮೈಗೆ ನೀಲಿಬಣ್ಣ, ತಲೆಗೆ ಕಿರೀಟ, ಕೈಯಲ್ಲಿ ಕೊಳಲು ಹಿಡಿದ ಪುಟಾಣಿಗಳು ಕೃಷ್ಣನ ವಿವಿಧ ಭಂಗಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು. ಸೋಮವಾರ ಕೂಡ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.

2 ಸಾವಿರ ವಿಗ್ರಹಗಳ ಅಲಂಕಾರ
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಹಕಾರ ನಗರದಲ್ಲಿರುವ ತಿರುಮಲಾಚಾರ್ ಅವರು ತಮ್ಮ ನಿವಾಸದಲ್ಲಿ 2 ಸಾವಿರ ಕೃಷ್ಣನ ವಿಗ್ರಹಗಳನ್ನು ಅಲಂಕರಿಸಿ, ಪ್ರದರ್ಶನಕ್ಕೆ ಇರಿಸಿದ್ದಾರೆ. ದಸರಾ ಬೊಂಬೆಯ ಮಾದರಿಯಲ್ಲಿ ಹೂವು ಮತ್ತು ಹಣ್ಣಿನಿಂದ ಅಲಂಕಾರ ಮಾಡಿದ್ದಾರೆ. ಪುರಾತನ ಮತ್ತು ವಿಶೇಷ ಕೃಷ್ಣನ ವಿಗ್ರಹಗಳನ್ನು ಕೂಡ ಇರಿಸಿದ್ದಾರೆ. 80 ವರ್ಷದ ಅವರು ಪ್ರತಿವರ್ಷ ವಿಶೇಷ ರೀತಿಯಲ್ಲಿ ಕೃಷ್ಣನ ವಿಗ್ರಹಗಳನ್ನು ಅಲಂಕಾರ ಮಾಡುತ್ತಾ ಬಂದಿದ್ದಾರೆ.

ಸಹಕಾರ ನಗರದಲ್ಲಿ ತಿರುಮಲಾಚಾರ್ ಅವರು ಭಾನುವಾರ ತಮ್ಮ ನಿವಾಸದಲ್ಲಿ ಕೃಷ್ಣನ 2 ಸಾವಿರ ವಿಗ್ರಹಗಳನ್ನು ಅಲಂಕರಿಸಿ ಆರಾಧಿಸಿದರು

ಆನ್‌ಲೈನ್‌ ಮೂಲಕ ಕೃಷ್ಣನ ಆರಾಧನೆ
ನಗರದ ಇಸ್ಕಾನ್‌ ದೇವಾಲಯದಲ್ಲಿ ಭಾನುವಾರ ಮುಂಜಾನೆಯಿಂದ ರಾತ್ರಿಯವರೆಗೂ ವಿವಿಧ ಕಾರ್ಯಕ್ರಮಗಳು ನಡೆದವು. ಭಕ್ತರುಆನ್‌ಲೈನ್ ಮೂಲಕವೇ ಕೃಷ್ಣನ ಪೂಜೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರವಚನಗಳೂ ನಡೆದವು. ತಡರಾತ್ರಿಯವರೆಗೂ ನಿರಂತರ ಕಾರ್ಯಕ್ರಮಗಳು ಜರುಗಿದವು. ಸೋಮವಾರ ಕೂಡ ಬೆಳಿಗ್ಗೆಯಿಂದ ರಾತ್ರಿವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಕೋವಿಡ್‌ ನಿರ್ಬಂಧದಿಂದಾಗಿ ಭಕ್ತಾಧಿಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಎಲ್ಲ ಕಾರ್ಯಕ್ರಮಗಳು www.iskconbangalore.org ಮೂಲಕ ವೀಕ್ಷಿಸಬಹುದಾಗಿದೆ ಎಂದು ಇಸ್ಕಾನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.