ಬೆಂಗಳೂರು: ‘ನಾನು ಬಸವಣ್ಣನ ಅಪ್ಪಟ ಅಭಿಮಾನಿ. ಈಗಲೂ ಬಸವ ತತ್ವದಲ್ಲಿ ನಂಬಿಕೆ-ಬದ್ದತೆ ಇಟ್ಟುಕೊಂಡೇ ಸಾರ್ವಜನಿಕ ಜೀವನದಲ್ಲಿದ್ದೇನೆ. ಅವರ ತತ್ವದ ಮೇಲೆಯೇ ನಮ್ಮ ಸರ್ಕಾರವೂ ನಡೆಯುತ್ತಿದೆ. ಭಾಗ್ಯ, ಗ್ಯಾರಂಟಿ ಯೋಜನೆಗಳ ಹಿಂದೆ ಅವರ ಆಶಯವಿದೆ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಅರಮನೆ ಮೈದಾನದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟ ಭಾನುವಾರ ಆಯೋಜಿಸಿದ್ದ ‘ಬಸವ ಸಂಸ್ಕೃತಿ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ನಮ್ಮಲ್ಲಿ ಅನೇಕ ಜಾತಿ, ಧರ್ಮಗಳಿವೆ. ನಾವೆಲ್ಲರೂ ಶೂದ್ರರು. ಚಾತುವರ್ಣ ವ್ಯವಸ್ಥೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವವರು. ಜಾತಿ ಯಾವುದೇ ಆದರೂ ನಾವೆಲ್ಲರೂ ಒಂದೇ ಎನ್ನುವುದನ್ನು ಶೂದ್ರರು ಅರಿಯಬೇಕು. ನಾವು ಮನುಷ್ಯ ನಿರ್ಮಿತ ಜಾತಿ, ಧರ್ಮದ, ಅಸಮಾನತೆಯ ತಾರತಮ್ಯಗಳನ್ನು ಸಹಿಸುವುದು ಅಷ್ಟೇ ಅಲ್ಲ. ಆಚರಿಸಲೂಬಾರದು’ ಎಂದರು.
‘ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಇಡೀ ಸರ್ಕಾರ ಬಸವಣ್ಣನವರಿಗೆ ಗೌರವ ಸೂಚಿಸಿದೆ. ಬಸವಣ್ಣನವರು ನುಡಿದಂತೆ ನಡೆದರು. ನಾವು ನುಡಿದಂತೆ ನಡೆದಾಗ ಮಾತ್ರ ನಿಜವಾದ ಬಸವ ಅನುಯಾಯಿಗಳಾಗುತ್ತೇವೆ’ ಎಂದರು.
ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಬಸವಣ್ಣ ಹೇಳಿದಂತೆ ಲಿಂಗಾಯತರು ದಲಿತ ಸಮುದಾಯಗಳ ಜನರನ್ನು ಬರಮಾಡಿಕೊಂಡು, ಲಿಂಗಧಾರಣೆ ಮಾಡಿಸಿದ್ದರೆ ಇಂದು ಅವರ ಸಂಖ್ಯೆ ಶೇ 87ರಷ್ಟಿರುತ್ತಿತ್ತು. ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರೆಲ್ಲ ನಿಜವಾದ ಅರ್ಥದಲ್ಲಿ ಬಸವಣ್ಣನ ಮಕ್ಕಳೇ ಆಗಿದ್ದೇವೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಸ್ವಾಮೀಜಿಗಳು, ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ. ಶರಣಪ್ರಕಾಶ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ, ಶಾಸಕ ಬಿ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ಸಾಹಿತಿ ಗೊ.ರು. ಚನ್ನಬಸಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.