ADVERTISEMENT

ಬ್ಯಾರಿ ಕೂಟ | ಬ್ಯಾರಿಗಳೇ ಇಬ್ಭಾಗವಾಗದೇ ಅಸ್ಮಿತೆ ಉಳಿಸಿಕೊಳ್ಳಿ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 18:00 IST
Last Updated 1 ಫೆಬ್ರುವರಿ 2026, 18:00 IST
‘ಬ್ಯಾರಿ ಕೂಟ’ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಸಿದ್ದರಾಮಯ್ಯ, ಯು.ಟಿ. ಖಾದರ್‌ ಅವರು ಹೂವು ನೀಡಿ ಗೌರವಿಸಿದರು
‘ಬ್ಯಾರಿ ಕೂಟ’ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳಿಗೆ ಸಿದ್ದರಾಮಯ್ಯ, ಯು.ಟಿ. ಖಾದರ್‌ ಅವರು ಹೂವು ನೀಡಿ ಗೌರವಿಸಿದರು   

ಬೆಂಗಳೂರು: ‘ನಿಮ್ಮನ್ನು ಇಬ್ಭಾಗ ಮಾಡಲು ಯಾರೇ ಪ್ರಯತ್ನಿಸಿದರೂ ನೀವು ಅದಕ್ಕೆ ಆಸ್ಪದ ಕೊಡಬಾರದು. ಒಗ್ಗಟ್ಟಾಗಿರಬೇಕು. ಎಲ್ಲೇ ಹೋದರೂ ಬ್ಯಾರಿ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬ್ಯಾರೀಸ್ ಸೆಂಟ್ರಲ್ ಕಮಿಟಿ ಭಾನುವಾರ ಆಯೋಜಿಸಿದ್ದ ‘ಬ್ಯಾರಿ ಕೂಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವ್ಯಾಪಾರ ವೃತ್ತಿಯ ಬ್ಯಾರಿಗಳ ವಾಸ ದಕ್ಷಿಣ ಕನ್ನಡವಾಗಿದ್ದರೂ ದೇಶ, ವಿದೇಶಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ಬ್ಯಾರಿ ಸಂಸ್ಕೃತಿಯನ್ನು, ಅಸ್ಮಿತೆಯನ್ನು ಬಿಟ್ಟುಕೊಟ್ಟಿಲ್ಲ. ಮುಂದೆಯೂ ಬಿಡಬೇಡಿ ಎಂದು ಸಲಹೆ ನೀಡಿದರು.

ADVERTISEMENT

‘ಬೆಸ್ತರು, ಬಂಟರು, ಕೊಂಕಣಿಗಳ ಸಹಿತ ಎಲ್ಲರೊಂದಿಗೆ ಹೊಂದಿಕೊಂಡು ಅವರಂತೆಯೇ ಬದುಕುವ ಬ್ಯಾರಿಗಳಿಗೆ ಜಾತಿ, ಧರ್ಮದ ವ್ಯಾಮೋಹ ಅಷ್ಟೊಂದು ಇಲ್ಲ. ಯಾವುದೇ ಧರ್ಮವೂ ಪ್ರೀತಿಸಿ ಎಂದು ಹೇಳಿಕೊಡುತ್ತದೆಯೇ ಹೊರತು ದ್ವೇಷ ಮಾಡಲು ಹೇಳಿಕೊಡುವುದಿಲ್ಲ. ಧರ್ಮವನ್ನು ನಮ್ಮ ಅನುಕೂಲಕ್ಕೆ ಬೇಕಾದಂತೆ ವ್ಯಾಖ್ಯಾನ ಮಾಡುವುದು ಸರಿಯಾದ ಕ್ರಮವಲ್ಲ. ನಾವು ಮನುಷ್ಯರು ಎಂಬುದನ್ನು ಮರೆಯಬಾರದು. ಜಾತ್ಯತೀತವಾಗಿ ಬದುಕಬೇಕು’ ಎಂದರು.

ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಇತ್ತೀಚೆಗೆ ಬ್ಯಾರಿ ಹೆಣ್ಣುಮಕ್ಕಳಿಗೂ ಉತ್ತಮ ಶಿಕ್ಷಣ ಸಿಗುತ್ತಿರುವುದು ಉತ್ತಮ ಬೆಳವಣಿಗೆ. ಲಿಂಗ ತಾರತಮ್ಯ ಹೋಗಬೇಕಾದರೆ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕು ಎಂದು ತಿಳಿಸಿದರು.

ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಮಾತನಾಡಿ, ‘ಉದ್ಯಮ, ಶಿಕ್ಷಣ ಸಹಿತ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕೂಟವೇ ಬ್ಯಾರಿ ಕೂಟ. ಒಂದೇ ತಾಯಿಯ ಮಕ್ಕಳಂತೆ ಬ್ಯಾರಿ ಸಂಸ್ಕೃತಿಯನ್ನು ಪರಂಪರೆ, ಆಚಾರ, ವಿಚಾರವನ್ನು ತಿಳಿಸಿಕೊಡುವ ಕಾರ್ಯಕ್ರಮ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವಿದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಸಿಗಳಾದ ಬ್ಯಾರಿಗಳು ವ್ಯಾಪಾರ ಮತ್ತು ದುಡಿಮೆಯನ್ನು ನಂಬಿರುವ ಸಮುದಾಯ. ಬಡವರಿಂದ ಹಿಡಿದು ಶ್ರೀಮಂತರವರೆಗೆ ಅವರಿಗೆ ಬೇಕಾದುದನ್ನು ಒದಗಿಸುವ ಕೆಲಸವನ್ನು ಬ್ಯಾರಿಗಳು ಮಾಡುತ್ತಾರೆ. ಮೀನು ಮಾರಿ, ಪೇಪರ್‌, ಬಾಟಲ್‌ ಸಂಗ್ರಹಿಸಿ ಮನೆ ನಿರ್ವಹಣೆ ಮಾಡುತ್ತಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾರೆ. ಬ್ಯಾರಿಗಳು ಸ್ವಾಭಿಮಾನಿಗಳು ಎಂದರು.

ಬ್ಯಾರೀಸ್ ಸೆಂಟ್ರಲ್ ಕಮಿಟಿ ಅಧ್ಯಕ್ಷ ಶಬೀರ್‌ ಬ್ರಿಗೇಡ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್‌ ಅಲಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌., ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.