ಬೆಂಗಳೂರು: ‘ಬಡವರ ಪರವಾಗಿ ನಾವು ಜಾರಿಗೆ ತಂದ ಕಾರ್ಯಕ್ರಮಗಳ ಬಗ್ಗೆ ಅದೇನು ಅವರ ಅಪ್ಪನ ಮನೆಯಿಂದ ತಂದ್ರಾ ಎಂದು ಕೆಲವರು ಟೀಕಿಸುತ್ತಾರೆ. ಹಾಗಾದರೆ ಬೇರೆಯವರು ಅಧಿಕಾರ ಸಿಕ್ಕಿದಾಗ ಯಾಕೆ ಅವರು ಬಡಜನರ ಪರವಾಗಿ ಕಾರ್ಯಕ್ರಮ ರೂಪಿಸಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ, ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಬಡವರಿಗೆ ನೆರವಾಗುವ ಆಲೋಚನೆ, ಮನಸ್ಸು ಅಧಿಕಾರದಲ್ಲಿ ಇರುವವರಿಗೆ ಇದ್ದಾಗ ಮಾತ್ರ ಜನಪರ ಯೋಜನೆ ರೂಪಿಸಲು ಸಾಧ್ಯ. ಉಪಕಾರ ಮಾಡಿದವರನ್ನು ನಾವು ಯಾವತ್ತೂ ಮರೆಯಬಾರದು’ ಎಂದರು.
ಅರಸು ಅವರು ಎಲ್ಲ ವಿರೋಧಗಳ ನಡುವೆ ‘ಉಳುವವನೇ ಒಡೆಯ’ ಭೂಸುಧಾರಣೆ ಕಾಯ್ದೆ ಜಾರಿ ಮಾಡಿದ್ದರು. ಮಲಹೊರುವ ಪದ್ಧತಿ, ಜೀತ ಪದ್ಧತಿ ನಿಷೇಧಿಸಿದ್ದರು ಎಂದು ನೆನಪು ಮಾಡಿಕೊಂಡರು.
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ‘ಅರಸು ಅವರ ಕಾಲದಲ್ಲಿಯೇ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. ಅದರ 50ನೇ ವರ್ಷವನ್ನು ಹಿಂದಿನ ಸರ್ಕಾರ ಮರೆತುಬಿಟ್ಟಿತ್ತು. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು’ ಎಂದು ಹೇಳಿದರು.
ಪತ್ರಕರ್ತ ಕಲ್ಲೆ ಶಿವೋತ್ತಮರಾವ್ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಭಾಷಣವನ್ನು ಅವರ ಮಗ ಅಜಿತ್ ಕಲ್ಲೆ ವಾಚಿಸಿದರು. ರಾಜೀವ್ ಗಾಂಧಿ ಅವರ ಜನ್ಮ ದಿನದ ಪ್ರಯುಕ್ತ ಸ್ಮರಿಸಲಾಯಿತು.
Highlights -
‘ಅರಸು ನಂತರ ನಾನೇ ದೀರ್ಘಕಾಲದ ಸಿಎಂ’
‘ಡಿ. ದೇವರಾಜ ಅರಸು ಅವರು ಎಂಟು ವರ್ಷ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದರು. ಅವರ ನಂತರದ ದೀರ್ಘಕಾಲ ಆಳ್ವಿಕೆ ಮಾಡಿರುವುದು ನಾನೇ. ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಅವಧಿಯನ್ನು ಪೂರ್ಣಗೊಳಿಸಿದ್ದರು. ನಾನೂ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ಇದಿಷ್ಟು ನಮ್ಮ ನಡುವೆ ಇರುವ ಸಾಮ್ಯತೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.