ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಮಾಜಿ ಸೈನಿಕ, ಹಾಸನ ಜಿಲ್ಲೆ ಸಕಲೇಶಪುರದ ನಿವಾಸಿ ವಸಂತಕುಮಾರ್ ಅವರನ್ನು ಸಿಸಿಬಿಯ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ವಸಂತಕುಮಾರ್ ಅವರು ಸೇನೆಯಿಂದ ನಿವೃತ್ತರಾದ ಬಳಿಕ ಸಕಲೇಶಪುರ ಸಮೀಪದ ಗ್ರಾಮವೊಂದರಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಐ.ಪಿ ವಿಳಾಸ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಮೈಸೂರು ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡುವಾಗ ದ್ರೌಪದಿ ಮುರ್ಮು ಅವರನ್ನು ಕನ್ನಡ ಬರುತ್ತಾ ಎಂಬುದಾಗಿ ಕೇಳಿದ್ದರು. ಈ ರೀತಿ ಪ್ರಶ್ನೆ ಮಾಡಿದ್ದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಆರೋಪಿ ವಸಂತಕುಮಾರ್ ಅವರು ಫೇಸ್‌ಬುಕ್‌ನ ಹನುಮಂತ ಭಕ್ತ ಎಂಬ ಖಾತೆಯಲ್ಲಿ ಅಶ್ಲೀಲವಾಗಿ ಕಮೆಂಟ್ ಮಾಡಿದ್ದರು. ಈ ಸಂಬಂಧ ಬಂದ ದೂರು ಆಧರಿಸಿ, ಸಿಸಿಬಿಯ ಸಾಮಾಜಿಕ ಜಾಲತಾಣಗಳ ನಿರ್ವಹಣಾ ವಿಭಾಗದ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.