ADVERTISEMENT

ಅನ್ನಭಾಗ್ಯ ದೇಶಕ್ಕೆ ವಿಸ್ತರಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 21:45 IST
Last Updated 30 ಜೂನ್ 2020, 21:45 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕೊರೊನಾ ತೀವ್ರತೆ ನೋಡಿದರೆ ಇದು 2–3 ತಿಂಗಳೊಳಗೆ ಕೊನೆಗೊಳ್ಳುವಂತದ್ದಲ್ಲ. ದೇಶದಲ್ಲಿ ಹಸಿವಿನ ಸಮಸ್ಯೆ ಇನ್ನಷ್ಟು ಭೀಕರವಾಗಲಿದೆ. ನಾವು ರಾಜ್ಯದಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.

ಮಂಗಳವಾರ ಪ್ರಧಾನಿ ಅವರು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ ಬಳಿಕ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕೊರೊನಾ ಚಿಕಿತ್ಸೆ ದುಬಾರಿಯಾಗಿದ್ದುಜನ ಹೆದರುವಂತಾಗಿದೆ. ರಾಜ್ಯಗಳಿಗೆ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಿಎಂ ಕೇರ್ಸ್‌ ನಿಧಿಯ ವೆಚ್ಚದ ಬಗ್ಗೆ ಸ್ಪಷ್ಟೀಕರಣ ನೀಡಿಲ್ಲ. ತೈಲಬೆಲೆ ಏರಿಕೆ ಇನ್ನೆಷ್ಟು ದಿನ ಎಂದಾದರೂ ಹೇಳಿದ್ದರೆ ಜನ ಕೆಟ್ಟದಿನಗಳಿಗೆ ಹೊಂದಿಕೊಳ್ಳಲು ಸಿದ್ಧವಾಗುತ್ತಿದ್ದರು. ವೀರಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದವರು ಏನು ಮಾಡಿದ್ದಾರೆ ಎಂದು ಹೇಳಿಲ್ಲ. ಕೊರೊನಾ ಸೋಂಕಿನಿಂದ ತತ್ತರಿಸಿರುವ ಜನರಲ್ಲಿ ಆತ್ಮವಿಶ್ವಾಸ ತುಂಬಿಸುವ ಯಾವ ನಿರ್ದಿಷ್ಟ ಯೋಜನೆಗಳ ಪ್ರಸ್ತಾವ ಇಲ್ಲದ ಪ್ರಧಾನಿ ಭಾಷಣ ಕೈಲಾಗದ ನಾಯಕನ ಗೋಳಾಟದಂತಿತ್ತು’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.

ADVERTISEMENT

ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್‌ ಕಲ್ಯಾಣ ಯೋಜನೆಯನ್ನು ನವೆಂಬರ್‌ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಸೋನಿಯಾ ಗಾಂಧಿ ಅವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೆ ಮೊದಲು ಟ್ವೀಟ್ ಮಾಡಿದ್ದ ಅವರು, ಕೊರೊನಾ ಚಿಕಿತ್ಸೆ ವಿಚಾರದಲ್ಲಿ ರಾಜ್ಯದಲ್ಲಿ ಬಡವರಿಗೆ ದಿಕ್ಕಿಲ್ಲದಂತಹ ಸ್ಥಿತಿ ತರಬೇಡಿ ಎಂದು ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.