ADVERTISEMENT

ಭೋವಿ ನಿಗಮವೇ ಸಮುದಾಯಕ್ಕೆ ಶಾಪ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 19:54 IST
Last Updated 16 ಜನವರಿ 2019, 19:54 IST
ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕರಿಯಪ್ಪ ಮಾಳಿಗೆ, ಅಖಂಡ ಶ್ರೀನಿವಾಸಮೂರ್ತಿ, ಎಚ್‌.ರವಿ ಮಾಕಳಿ, ಬಲವಂತರಾವ್ ಪಾಟೀಲ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕರಿಯಪ್ಪ ಮಾಳಿಗೆ, ಅಖಂಡ ಶ್ರೀನಿವಾಸಮೂರ್ತಿ, ಎಚ್‌.ರವಿ ಮಾಕಳಿ, ಬಲವಂತರಾವ್ ಪಾಟೀಲ ಪುಷ್ಪನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭೋವಿ ಅಭಿವೃದ್ಧಿ ನಿಗಮ ಸಮುದಾಯಕ್ಕೆ ವರವಾಗದೆ, ಶಾಪವಾಗಿದೆ’ ಎಂದು ಚಿತ್ರದುರ್ಗದ ಶಿವಯೋಗಿ ಸಂಸ್ಥಾನ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳವಾರ ಆಯೋಜಿಸಿದ್ದ ‘ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ’ಯಲ್ಲಿ ಅವರು ಮಾತನಾಡಿದರು.

‘ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನು ಅಂಬೇಡ್ಕರ್‌ ಅಭಿವೃದ್ಧಿ ನಿಗಮದಲ್ಲಿ ಕೇಳಿದರೆ, ಭೋವಿ ನಿಗಮಕ್ಕೆ ಹೋಗಿ ಕೇಳಿ ಎನ್ನುತ್ತಾರೆ. ಭೋವಿ ನಿಗಮಕ್ಕೆ ಸರ್ಕಾರ ಹೆಚ್ಚಿನ ಅನುದಾನವನ್ನೇ ನೀಡುತ್ತಿಲ್ಲ. ಆಡಳಿತ ವರ್ಗ ಸಮುದಾಯದೊಂದಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಗೈರುಹಾಜರಿಯನ್ನು ಟೀಕಿಸಿದ ಅವರು, ‘ಈ ಜಯಂತಿಯನ್ನು ಕಾಟಾಚಾರಕ್ಕೆ ಮಾಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಸಿದ್ಧರಾಮೇಶ್ವರ ಅಧ್ಯಯನ ಪೀಠ ಸ್ಥಾಪಿಸಬೇಕು. ಅಲ್ಲಿ ಉಚಿತವಾಗಿ ಅಧ್ಯಯನಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು. ಶಾಸಕ ಅಖಂಡ ಶ್ರೀನಿವಾಸಮೂರ್ತಿ, ‘ಸಮುದಾಯದ ವ್ಯಕ್ತಿಯೊಬ್ಬರು ಕೆಪಿಎಸ್ಸಿ ಸದಸ್ಯರಾಗಬೇಕು. ಸಮುದಾಯದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಹೆಚ್ಚಬೇಕಿದೆ’ ಎಂದರು.

‘ನಮ್ಮ ಸಮುದಾಯದಸುಮಾರು 7 ಕೋಟಿ ಜನದೇಶದಲ್ಲಿದ್ದಾರೆ. ನಮ್ಮಲ್ಲಿ ಶ್ರಮಜೀವಿಗಳು ಇದ್ದಾರೆ, ಸಂಘಟನೆ ಇಲ್ಲ. ನಾವೆಲ್ಲ ಒಂದಾಗಿ ಹೋರಾಡಿದರೆ, ಸೌಲಭ್ಯಗಳು ಬೇಗ ಸಿಗುತ್ತವೆ’ ಎಂದು ಭೋವಿ ಸಮಾಜದ ಕಾರ್ಯಾಧ್ಯಕ್ಷ ಎಚ್‌.ರವಿ ಮಾಕಳಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ‘ಭೋವಿ ಸಂಚಯನ’ ಕನ್ನಡ ಪಾಕ್ಷಿಕ ಮತ್ತು ಪಾಕೇಟ್‌ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.

**

ಸಿದ್ಧರಾಮೇಶ್ವರರ ವಚನಗಳನ್ನು ತಿದ್ದಿ, ಅರ್ಥ ವಿರೂಪಗೊಳಿಸುವ ಪ್ರಯತ್ನಗಳು ಈಗಲೂ ನಡೆಯುತ್ತಿವೆ.
- ಬಲವಂತರಾವ್‌ ಪಾಟೀಲ, ಹಂಗಾಮಿ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.