ADVERTISEMENT

ಮಹಿಳೆಯರಿಗೆ ಟೋಪಿ ಹಾಕಿದ ದೇವಮಾನವ: ಸಿದ್ದರಾಮಯ್ಯ

‘ಮಹಿಳಾ ಮೀಸಲಾತಿ’ ವಿಚಾರ ಸಂಕಿರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 20:17 IST
Last Updated 23 ಸೆಪ್ಟೆಂಬರ್ 2023, 20:17 IST
<div class="paragraphs"><p>ನಗರದಲ್ಲಿ ಶನಿವಾರ ನಡೆದ ‘ಮಹಿಳಾ ಮೀಸಲಾತಿ’ ವಿಚಾರ ಸಂಕಿರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.</p></div>

ನಗರದಲ್ಲಿ ಶನಿವಾರ ನಡೆದ ‘ಮಹಿಳಾ ಮೀಸಲಾತಿ’ ವಿಚಾರ ಸಂಕಿರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.

   

ಬೆಂಗಳೂರು: ‘ಮಹಿಳೆಯರಿಗೆ ಮೀಸಲಾತಿ ನೀಡಲು ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿಕೊಂಡಿರುವ ದೇವಮಾನವ, ಮಸೂದೆಯಲ್ಲಿ ಮಾತ್ರ ಹಲವು ಷರತ್ತುಗಳನ್ನು ಹಾಕಿ ಮಹಿಳೆಯರಿಗೆ ಟೋಪಿ ಹಾಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ವಿರುದ್ಧ ಕಿಡಿಕಾರಿದರು.

ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಶನಿವಾರ ಹಮ್ಮಿಕೊಂಡಿದ್ದ ‘ಮಹಿಳಾ ಮೀಸಲಾತಿ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಪ್ರಾಮಾಣಿಕತೆ ಬಿಜೆಪಿಯಲ್ಲಿ ಕಾಣುತ್ತಿಲ್ಲ. ವೋಟಿಗಾಗಿ ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಿದ್ದಾರೆ. ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ಬಿದ್ದರೂ ಜಾರಿಯಾಗದಂತೆ ಷರತ್ತುಗಳಿವೆ ಎಂದು ಹೇಳಿದರು.

ಮಹಿಳಾ ಮೀಸಲಾತಿಗೆ 15 ವರ್ಷಗಳ ಕಾಲಮಿತಿ ನಿಗದಿ ಮಾಡಿರುವುದು ಯಾಕೆ? ಮಸೂದೆ ಅಂಗೀಕಾರ ಆದ ಮೇಲೆ ಜಾರಿಯಾಗಬೇಕು. ಆದರೆ, ಕ್ಷೇತ್ರ ಪುನರ್‌ವಿಂಗಡಣೆಯಾದ ಮೇಲೆ, ಜನಗಣತಿ ನಡೆದ ಮೇಲೆ, ಕೇಂದ್ರ ಸರ್ಕಾರ ಸೂಚಿಸಿದ ದಿನಾಂಕದ ಬಳಿಕ ಜಾರಿಯಾಗಬೇಕು ಎಂದು ಕೊಕ್ಕೆಗಳನ್ನು ಇಟ್ಟಿರುವುದು ಯಾಕೆ? ಇದು ಜಾರಿಯಾಗುವ ಹೊತ್ತಿಗೆ 15 ವರ್ಷ ಮುಗಿದಿರುತ್ತದೆ ಎಂದರು.

‘ಮಹಿಳಾ ಮೀಸಲಾತಿ ತರುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದ್ದಿದ್ದರೆ ಇಷ್ಟೊತ್ತಿಗೆ ಜಾರಿಗೆ ತಂದು ಬಿಡುತ್ತಿದ್ದೆ. ಇವತ್ತಿಗೂ ಮಹಿಳೆಯರಿಗೆ ಟಿಕೆಟ್‌ ಹಂಚುವ ವಿಚಾರ ಬಂದಾಗ ಟಿಕೆಟ್‌ ನೀಡುವ ಮನಸ್ಸಿದ್ದರೂ ನೀಡಲಾಗುತ್ತಿಲ್ಲ. ಕ್ಷೇತ್ರಗಳಿಂದ ತರಿಸುವ ವರದಿಗಳು ಮಹಿಳಾ ಆಕಾಂಕ್ಷಿ ಪರ  ಇರುವುದಿಲ್ಲ. ಅದಕ್ಕೆ ಮಹಿಳಾ ಮೀಸಲಾತಿ ಜಾರಿಯಾದರೆ ಪ್ರಾತಿನಿಧ್ಯ ನೀಡಲೇಬೇಕಾಗುತ್ತದೆ’ ಎಂದು ತಿಳಿಸಿದರು.

ನ್ಯಾಯವಾದಿ ರವಿವರ್ಮ ಕುಮಾರ್‌ ವಿಷಯ ಮಂಡನೆ ಮಾಡಿ, ‘ನಾಡಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂವಾದ ನಡೆಸಿ ಬಳಿಕ ಯಾವುದೇ ಕಾಯ್ದೆಯನ್ನು ಜಾರಿಗೆ ತರುವುದು ಪ್ರಜಾಪ್ರಭುತ್ವ. ಆದರೆ, ಇತ್ತೀಚೆಗೆ ಎಲ್ಲವನ್ನು ರಹಸ್ಯವಾಗಿಟ್ಟು, ಕೊನೇ ಕ್ಷಣದಲ್ಲಿ ಒಂದು ಅಥವಾ ಎರಡೇ ದಿನಗಳಲ್ಲಿ ಲೋಕಸಭೆ, ರಾಜ್ಯಸಭೆಗಳಲ್ಲಿ ಅಂಗೀಕರಿಸುವುದು ಈಗಿನ ಮಾದರಿಯಾಗಿಬಿಟ್ಟಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜಕೀಯ ವಿಶ್ಲೇಷಕ ಮುಜಾಫರ್‌ ಅಸಾದಿ ಮಾತನಾಡಿ, ‘ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ, ಸಮಾಜವಾದವನ್ನು ತೆಗೆದು ಹಾಕಿದ್ದಾರೆ. ಸಮಾಜದಲ್ಲಿಯೂ ಇದು ಕಾಣೆಯಾಗುತ್ತಿದೆ. ಅದೇ ರೀತಿ ಮುಂದೆ ಪ್ರಜಾಪ್ರಭುತ್ವವೂ ಇವರ ಕೈಯಲ್ಲಿ ಕಾಣೆಯಾಗಬಹುದು’ ಎಂದು ಎಚ್ಚರಿಸಿದರು.

ಪ್ರತಿಕ್ರಿಯೆಗಳು

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ನಾನು ಬಹಳ ಕಷ್ಟಪಟ್ಟೆ. ಮಸೂದೆ ಜಾರಿಯಾದರೆ ಕಷ್ಟ ತಪ್ಪಬಹುದು. ಅದಕ್ಕಾಗಿ ಮಸೂದೆಯನ್ನು ಸ್ವಾಗತಿಸುತ್ತೇನೆ. ಈಗ ಹಾಕಿರುವ ಷರತ್ತುಗಳನ್ನು ಮುಂದೆ ಕಾಂಗ್ರೆಸ್‌ ನೇತೃತ್ವದ ‘ಇಂಡಿಯಾ’ ತೆಗೆದು ಹಾಕಿ ಜಾರಿ ಮಾಡುತ್ತದೆ ಎಂಬ ವಿಶ್ವಾಸ ಇದೆ. ಒಂದು ವೇಳೆ ಇವರೇ ಅಧಿಕಾರಕ್ಕೆ ಬಂದು ಜಾರಿ ಮಾಡದೇ ಇದ್ದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ಮಾಡುತ್ತೇನೆ.

-ನಯನಾ ಮೋಟಮ್ಮ ಶಾಸಕಿ

ಮಸೂದೆಗೆ ‘ನಾರಿಶಕ್ತಿ ವಂದನ್‌ ಅಧಿನಿಯಮ್‌’ ಎಂಬ ಹೆಸರೇ ಸರಿ ಇಲ್ಲ. ಮಹಿಳೆಯರನ್ನು ವಂದಿಸಿ ದೇವಿಯರಂತೆ ಕೂರಿಸಲು ಇದು ಜಾರಿಗೆ ತರುತ್ತಿರುವುದೇ? ಮಹಿಳೆಯರಿಗೆ ನೀಡುವ ಪ್ರಾತಿನಿಧ್ಯವೇ ಮಹಿಳಾ ಮೀಸಲಾತಿ.

ಅಶ್ವಿನಿ ಓಬಲೇಶ್‌ ವಕೀಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.