ಬೆಂಗಳೂರು: ಹುಬ್ಬಳ್ಳಿಯ ಸಿದ್ಧಾರೂಢ ಮಠ ಹಮ್ಮಿಕೊಂಡಿರುವ ಅರಿವು, ಏಕತೆ, ಶಾಂತಿ ಸಹಬಾಳ್ವೆ ಸಾರುವ ಜ್ಯೋತಿ ರಥಯಾತ್ರೆಯನ್ನು ಜನವರಿ 6ರಂದು ಬೆಳಿಗ್ಗೆ 11ಕ್ಕೆ ಕೆಂಗೇರಿಯಲ್ಲಿ ರಾಮೋಹಳ್ಳಿ ಸಿದ್ಧಾರೂಢ ಮಿಷನ್ ಸ್ವಾಗತಿಸಲಿದೆ.
ಸಿದ್ಧಾರೂಢ ಸ್ವಾಮಿಯವರ 190ನೇ ಜಯಂತಿ, ಗುರುನಾಥರೂಢ ಸ್ವಾಮಿಯವರ 115ನೇ ಜಯಂತಿ ಪ್ರಯುಕ್ತ ಡಿಸೆಂಬರ್ 23ರಂದು ಸಿದ್ಧಾರೂಢರ ಜನ್ಮಸ್ಥಳ ಬೀದರ್ ಜಿಲ್ಲೆಯ ಚಳಕಾಪುರದಿಂದ ಜ್ಯೋತಿ ಹೊರಟಿದ್ದು, ಜ.6ಕ್ಕೆ ಬೆಂಗಳೂರು ತಲುಪಲಿದೆ. ಅಂದು ರಾಮೋಹಳ್ಳಿ ಸಿದ್ಧಾರೂಢ ಮಿಷನ್ ಆಶ್ರಮದಲ್ಲಿ ಸಮಾರಂಭ ನಡೆಯಲಿದೆ. ಜ.7ರಂದು ಕೆಂಗೇರಿಯಿಂದ ಉಲ್ಲಾಳ ಜಂಕ್ಷನ್‌ವರೆಗಿನ ಭಗವಾನ್ ಸಿದ್ಧಾರೂಢ ರಸ್ತೆಯಲ್ಲಿ ಸಂಚರಿಸಿ ಹೌಸಿಂಗ್ ಬೋರ್ಡ್‌ನ ಸಿದ್ಧಾರೂಢ ಉದ್ಯಾನ, ಗೋವಿಂದರಾಜ ನಗರದ ಪರಮಹಂಸ ಸನ್ಯಾಸಾಶ್ರಮ, ವಿಜಯನಗರದ ಆದಿಚುಂಚನಗಿರಿ ಮಠ ತಲುಪಲಿದೆ. ಅಲ್ಲಿಂದ ಮಹಾಲಕ್ಷ್ಮಿಪುರ, ಕುರುಬರ ಹಳ್ಳಿ, ಗಾಯತ್ರಿ ನಗರಗಳ ಸಿದ್ಧಾರೂಢ ಉದ್ಯಾನ, ಗಾಯತ್ರಿನಗರ ಮತ್ತು ಮಲ್ಲೇಶ್ವರದ ಸಿದ್ಧಾಶ್ರಮಗಳನ್ನು ಸಂದರ್ಶಿಸಲಿದೆ.
ಅಲ್ಲಿಂದ ಅಲ್ಲಾಳಸಂದ್ರದ ಯೋಗಿ ದೇವರಾಜರವರ ನಿವಾಸಕ್ಕೆ ತೆರಳಲಿದೆ. ಜ.8ರಂದು ವಿಧಾನಸೌಧ, ಪುರಭವನ, ಮಕ್ಕಳ ಕೂಟ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಮಹಿಳಾ ಸೇವಾ ಸಮಿತಿ, ಸಿದ್ಧಾಶ್ರಮ, ಬಸವನಗುಡಿಯ ರಾಮಕೃಷ್ಣಾಶ್ರಮ, ಗವಿಪುರದ ಗೋಸಾಯಿ ಮಠಗಳ ಮಾರ್ಗವಾಗಿ ಜಯನಗರ ಸಿದ್ಧಾರೂಢಾಶ್ರಮಕ್ಕೆ ತಲುಪಲಿದೆ. ಜ.9ರಂದು ಬನಶಂಕರಿ, ಉತ್ತರಹಳ್ಳಿ, ರಾಜರಾಜೇಶ್ವರಿ ನಗರದ ಕೈಲಾಸಾಶ್ರಮದ ಮಾರ್ಗವಾಗಿ ಮೈಸೂರು ರಸ್ತೆಯ ಸಿದ್ಧಾರೂಢಾಶ್ರಮ ತಲುಪಲಿದೆ. ಜ.10ರಂದು ರಾಜ್‌ಕುಮಾರ್ ಸಮಾಧಿ ರಸ್ತೆ, ತುಮಕೂರು ರಸ್ತೆ ಮೂಲಕ ನೆಲಮಂಗಲ ಬಳಿಯ ಹಂಚಿಪುರದ ಸಿದ್ಧಾರೂಢಮಠಕ್ಕೆ ಸಾಗಲಿದೆ ಎಂದು ಸಿದ್ಧಾರೂಢ ಮಿಷನ್‌ನ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.