ADVERTISEMENT

ಕಲ್ಲು ಗಣಿಗಾರಿಕೆಗೆ ವಿಧಿಸಿರುವ ನಿಯಮ ಸರಳಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 15:19 IST
Last Updated 9 ಡಿಸೆಂಬರ್ 2024, 15:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕಲ್ಲು ಗಣಿಗಾರಿಕೆ ಮತ್ತು ಕ್ರಷರ್‌ಗಳಿಗೆ ವಿಧಿಸಿರುವ ಕಠಿಣ ನಿಯಮಗಳನ್ನು ಸರಳಗೊಳಿಸಬೇಕು. ಐದು ಪಟ್ಟು ದಂಡ ವಿಧಿಸುವ ಬದಲು ಹೆಕ್ಟೇರ್‌ಗೆ ₹5 ಲಕ್ಷದವರೆಗೆ ನಿಗದಿಪಡಿಸಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು ಎಂದು ಬೆಂಗಳೂರು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಒತ್ತಾಯಿಸಿದೆ. 

ಅಸೋಸಿಯೇಶನ್‌ ಅಧ್ಯಕ್ಷ ಡಿ.ಸಿದ್ದರಾಜು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕಲ್ಲುಗಣಿಗಾರಿಕೆ ಮೇಲೆ ರಾಜ್ಯ ಸಚಿವ ಸಂಪುಟ ಸಭೆ ಕೈಗೊಂಡ ನಿರ್ಣಯ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ನಮ್ಮ ಸಂಘವು ದಂಡ ಪಾವತಿಸಲು ಸಿದ್ಧವಿದೆ. ವಿಪರೀತ ದಂಡ ವಿಧಿಸುವ ಈ ನಿಯಮವನ್ನು ಸರಳಗೊಳಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಕ್ರಷರ್‌ಗಳಿಂದ ಅವೈಜ್ಞಾನಿಕವಾಗಿ ವಿದ್ಯುತ್ ಬಿಲ್ ಪಡೆಯುವುದನ್ನು ಸ್ಥಗಿತಗೊಳಿಸಬೇಕು. ಸರಕು ಸರಬರಾಜು ಮಾಡುವ ಕಲ್ಲು ಕ್ರಷರ್ ಲಾರಿಗಳಿಗೆ ಅಳವಡಿಸಿರುವ ಜಿಪಿಎಸ್‌ ರದ್ದುಮಾಡಬೇಕು. ರಾಜಧನ ಎರಡು ಹಂತಗಳಲ್ಲಿ ಕ್ರೋಢೀಕರಣವಾಗುತ್ತಿದ್ದು, ಸರ್ಕಾರಿ ಕಾಮಗಾರಿ ಗುತ್ತಿಗೆದಾರರು ಅಥವಾ ಕಲ್ಲು ಗಣಿ ಗುತ್ತಿಗೆದಾರರಿಂದ ಮಾತ್ರ ಸಂಗ್ರಹ ಮಾಡಬೇಕು ಎಂದು ಆಗ್ರಹಿಸಿದರು.

ಒಂದೇ ಹಂತದಲ್ಲಿ ಸರ್ಕಾರವೇ ಇಸಿ ವಿತರಣೆಯಂತಹ ಸರಳ ಕ್ರಮಗಳನ್ನು ಕೈಗೊಳ್ಳಬೇಕು. ಇಂದಿನ ಖನಿಜ ಮಟ್ಟವನ್ನು ಸರ್ಕಾರವೇ ನಿಗದಿ ಮಾಡಿ ವರದಿ ನೀಡಬೇಕು. ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ ಮಾಡುವವರಿಗೆ 10 ವರ್ಷದ ಬದಲು 30 ವರ್ಷಗಳವರೆಗೆ ಗುತ್ತಿಗೆ ನೀಡಬೇಕು. ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ಮಾಡುವವರಿಗೆ ರಾಜಧನ ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಅಸೋಸಿಯೇಶನ್ ಗೌರವಾಧ್ಯಕ್ಷ ಸಂಜೀವ್ ಉಪಾಧ್ಯಕ್ಷರಾದ ಮನೋಜ್ ಶೆಟ್ಟರ್, ಎಚ್. ವಾಗೀಶ್, ಉಮಾಶಕರ್, ಮೋಹನ್, ಪುರುಷೋತ್ತಮ ವಿರೂಪಾಕ್ಷಗೌಡ ಪಾಟೀಲ್, ಪ್ರವೀಣ್ ಬಿ.ಹಿರೇಮಠ್, ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಡಿ.ಆರ್. ಮಹೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.