ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ ಹೊರನೋಟ
ಬೆಂಗಳೂರು: ಕೊಳೆಗೇರಿ ನಿವಾಸಿಗಳಿಗೆ ಆಸ್ಪತ್ರೆಯ ಜತೆಗೆ ಅವರ ವಾಸಸ್ಥಳದಲ್ಲಿಯೇ ಉಪಶಾಮಕ ಚಿಕಿತ್ಸೆ ಒದಗಿಸಲು ಇಲ್ಲಿನ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ ಮುಂದಾಗಿದೆ.
ಈ ಸಂಬಂಧ ಆಸ್ಪತ್ರೆಯು ಒನ್ ಬಿಲಿಯನ್ ಲಿಟರೇಟ್ಸ್ ಫೌಂಡೇಷನ್ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಆಸ್ಪತ್ರೆಯ ಸುತ್ತಮುತ್ತ ಕೊಳೆಗೇರಿ ಪ್ರದೇಶಗಳಿವೆ. ಇಲ್ಲಿನ ನಿವಾಸಿಗಳ ಆರೋಗ್ಯ ವೃದ್ಧಿಗೆ ಹಾಗೂ ಈಗಾಗಲೇ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆಸ್ಪತ್ರೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಉಪಶಾಮಕ ಚಿಕಿತ್ಸೆಗೆ ಪ್ರತ್ಯೇಕ ಹೊರರೋಗಿ ವಿಭಾಗ (ಒಪಿಡಿ) ಪ್ರಾರಂಭಿಸಲಾಗಿದ್ದು, ಒನ್ ಬಿಲಿಯನ್ ಲಿಟರೇಟ್ಸ್ ಫೌಂಡೇಷನ್‌ನ ವೈದ್ಯಕೀಯ ತಂಡವು ರೋಗಿಗಳನ್ನು ತಪಾಸಣೆ ಮಾಡುತ್ತಿದೆ.
ಈ ತಂಡವು ಸದ್ಯ ಪ್ರತಿ ಬುಧವಾರ ಆಸ್ಪತ್ರೆಗೆ ಭೇಟಿ ನೀಡುತ್ತಿದೆ. ಹೊರ ರೋಗಿಗಳ ಸಂಖ್ಯೆ ಆಧರಿಸಿ, ಮುಂದಿನ ದಿನಗಳಲ್ಲಿ ಆಸ್ಪತ್ರೆ ಭೇಟಿ ಅವಧಿಯನ್ನು ಎರಡು ದಿನಗಳಿಗೆ ವಿಸ್ತರಿಸಲೂ ಯೋಜನೆ ರೂಪಿಸಿದೆ. ಆಸ್ಪತ್ರೆಯಲ್ಲಿ ಉಪಶಾಮಕ ಚಿಕಿತ್ಸೆಗಾಗಿ 12 ಹಾಸಿಗೆಗಳ ವಾರ್ಡ್ ಅನ್ನು ಸಜ್ಜುಗೊಳಿಸಲಾಗಿದ್ದು, ತಲಾ ಆರು ಹಾಸಿಗೆಗಳನ್ನು ಪುರುಷರು ಹಾಗೂ ಮಹಿಳೆಯರಿಗೆ ಮೀಸಲಿಡಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಔಷಧಗಳನ್ನು ಆಸ್ಪತ್ರೆಯೇ ಒದಗಿಸುತ್ತಿದೆ.
ಕೊಳೆಗೇರಿಯಲ್ಲಿ ಒಪಿಡಿ: ಕ್ಯಾನ್ಸರ್, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶ ಮತ್ತು ಮೂತ್ರಪಿಂಡ ಸಮಸ್ಯೆಗಳು ಗಂಭೀರ ಸ್ವರೂಪ ಪಡೆದಿದ್ದಲ್ಲಿ, ಅಂತಹ ರೋಗಿಗಳಿಗೆ ನೋವು ಶಮನ ಮಾಡಲು ಈ ಚಿಕಿತ್ಸೆ ಸಹಕಾರಿ. ಕೊಳೆಗೇರಿ ನಿವಾಸಿಗಳು ದುಡಿಮೆ ಸಂಬಂಧ ದಿನವಿಡೀ ಹೊರಗಡೆ ಹೋಗುವುದರಿಂದ, ಮನೆಯಲ್ಲಿನ ರೋಗಿಗಳನ್ನು ಚಿಕಿತ್ಸೆಗೆ ಕರೆದೊಯ್ಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಕೊಳೆಗೇರಿಯಲ್ಲಿಯೇ ಹೊರ ರೋಗಿ ಚಿಕಿತ್ಸಾ ಘಟಕ (ಒಪಿಡಿ) ಪ್ರಾರಂಭಕ್ಕೆ ಆಸ್ಪತ್ರೆ ಮುಂದಾಗಿದೆ. ಈ ಸಂಬಂಧ ಕಟ್ಟಡಗಳಲ್ಲಿನ ನೆಲಮಹಡಿಯ ಸ್ಥಳಾವಕಾಶ ಅಗತ್ಯವಿದ್ದು, ಸರ್ವಜ್ಞ ನಗರದ ಶಾಸಕ ಕೆ.ಜೆ. ಜಾರ್ಜ್ ಅವರ ಜತೆಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ.
‘ಕೊಳೆಗೇರಿ ಪ್ರದೇಶದಲ್ಲಿ ಸ್ಥಳಾವಕಾಶ ಗುರುತಿಸಿದ ಬಳಿಕ ಅಲ್ಲಿಯೇ ನಾಲ್ಕೈದು ಹಾಸಿಗೆ ಅಳವಡಿಸಿ, ಒಪಿಡಿ ಸೇವೆ ಒದಗಿಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಅಲ್ಲಿಂದ ಆಸ್ಪತ್ರೆಗೆ ಕರೆತರಲಾಗುತ್ತದೆ’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್ ಕೆ.ಎಸ್. ತಿಳಿಸಿದರು.
ಉಪಶಾಮಕ ಚಿಕಿತ್ಸೆಯು ನೋವು ನಿವಾರಣೆಗೆ ಸಹಕಾರಿ. ಕೊಳೆಗೇರಿಯ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಶಕ್ತಿ ಕುಟುಂಬಸ್ಥರಿಗೆ ಇರುವುದಿಲ್ಲ. ಆದ್ದರಿಂದ ಚಿಕಿತ್ಸೆಗೆ ಕ್ರಮವಹಿಸಲಾಗಿದೆಡಾ.ರಾಜೇಶ್ ಕೆ.ಎಸ್. ವೈದ್ಯಕೀಯ ಅಧೀಕ್ಷಕ ಸರ್.ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.