ಬೆಂಗಳೂರು: ‘ಎಂಜಿನಿಯರ್‌ಗಳು ಸಮರ್ಪಕವಾಗಿ ಕೆಲಸ ಮಾಡಿದರೆ ನಾಗರಿಕರಿಂದ ತಾನಾಗಿಯೇ ಮೆಚ್ಚುಗೆ ಸಿಗಲಿದೆ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಭಿಪ್ರಾಯಪಟ್ಟರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಎಂಜಿನಿಯರ್ ದಿನಾಚರಣೆ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಾತುಗಳು ಬರುತ್ತವೆ, ಅದರ ಕಡೆ ಗಮನಹರಿಸಬಾರದು. ಒತ್ತಡದಲ್ಲಿಯೂ ಎಂಜಿನಿಯರ್‌ಗಳು ಉತ್ತಮವಾಗಿ ಕೆಲಸ ಮಾಡುತ್ತಾರೆ. ನಾವು ಚೆನ್ನಾಗಿ ಕೆಲಸ ಮಾಡಿದರೆ ನಮ್ಮ ಕೆಲಸವೇ ಮಾತನಾಡುತ್ತದೆ. ಉತ್ತಮ ನಗರ ನಿರ್ಮಾಣಕ್ಕೆ ಎಂಜಿನಿಯರ್‌ಗಳ ಶ್ರಮ ಹೆಚ್ಚಿದ್ದು, ಅವರನ್ನು ಗುರುತಿಸಲಾಗುತ್ತಿದೆ’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಎನ್. ಮಂಜುನಾಥ್ ಪ್ರಸಾದ್ ಮಾತನಾಡಿ, ‘ಎಂಜಿನಿಯರ್‌ಗಳ ಸತತ ಪರಿಶ್ರಮ, ಬುದ್ಧಿವಂತಿಕೆಯಿಂದ ಬೆಂಗಳೂರು ನಗರ ಉತ್ತಮವಾಗಿ ಬೆಳೆದುನಿಂತಿದೆ. ವಿಶ್ವೇಶ್ವರಯ್ಯ ಅವರ ಆದರ್ಶಗಳನ್ನು ಎಂಜಿನಿಯರ್‌ಗಳು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ನಿವೃತ್ತ ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್ ಮಾತನಾಡಿ, ‘ವಿಶ್ವೇಶ್ವರಯ್ಯ ಅವರ ತತ್ವಗಳನ್ನು ನಾವು ಪಾಲನೆ ಮಾಡಬೇಕು. ಪ್ರತಿಭಾನ್ವಿತ ಎಂಜಿನಿಯರ್‌ಗಳು ದೇಶವನ್ನು ಕಟ್ಟಬಲ್ಲರು ಎಂಬುದಕ್ಕೆ ವಿಶ್ವೇಶ್ವರಯ್ಯ ಅವರು ಮಾದರಿ’ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ- ಪಾಲಿಕೆಗಳ ಅಧಿಕಾರಿ-ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು: ಮುಖ್ಯ ಎಂಜಿನಿಯರ್‌ಗಳಾದ ಲೋಕೇಶ್, ವಿಜಯ್ ಕುಮಾರ್ ಹರಿದಾಸ್, ಎಸ್.ಪಿ. ರಂಗನಾಥ್, ನಗರ ಯೋಜನೆ ಹೆಚ್ಚುವರಿ ನಿರ್ದೇಶಕ ಬಿ.ಎನ್. ಗಿರೀಶ್, ಕಾರ್ಯಪಾಲಕ ಎಂಜಿನಿಯರ್‌ಗಳಾದ ಸುಧಾಕರ್, ಎಂ.ಪಿ. ಬಾಲಾಜಿ, ಜೆ. ನಿತ್ಯಾ, ರವಿಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಎಚ್.ಕೆ. ತಿಪ್ಪೇಶ್, ಎಂ. ಫರ್ಜಾನಾ, ಎಂ.ಎಸ್. ರೇಖಾ, ಕೆ. ಮಂಜೇಗೌಡ, ಸಹಾಯಕ ಎಂಜಿನಿಯರ್ ರಾಕೇಶ್ ಯಾದವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.