ಪೊಲೀಸ್ – ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಹಾಗೂ ಸೌಜನ್ಯ ಪ್ರಕರಣಗಳ ಕುರಿತು ಮರು ತನಿಖೆ ನಡೆಸಲು ಇನ್ನೊಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಎಡ ಪಕ್ಷಗಳು ಆಗ್ರಹಿಸಿವೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಕಾರ್ಯದರ್ಶಿ ಕೆ.ಪ್ರಕಾಶ್, ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ–ಎಂಎಲ್‌ನ ಸದಸ್ಯೆ ಲೇಖಾ, ‘ಈ ಎಲ್ಲ ಪ್ರಕರಣಗಳ ಕುರಿತು ಸರಿಯಾಗಿ ತನಿಖೆ ನಡೆಸದೇ ಮುಚ್ಚಿ ಹಾಕಲಾಗಿದೆ. ಸೌಜನ್ಯ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಸಿಬಿಐ ನ್ಯಾಯಾಲಯವೇ ಹೇಳಿದೆ. ಆದ್ದರಿಂದ ಈ ಬಗ್ಗೆ ಮರು ತನಿಖೆ ನಡೆಸಲು ಪ್ರಣವ್ ಮೊಹಾಂತಿ ನೇತೃತ್ವದ ಎಸ್‌ಐಟಿಗೆ ವಹಿಸಬೇಕು. ಇಲ್ಲದಿದ್ದರೆ ಮತ್ತೊಂದು ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ಅಸಹಜ ಸಾವುಗಳು, ಅತ್ಯಾಚಾರಗಳು, ಕೊಲೆ ಪ್ರಕರಣಗಳಿಗೆ ಭೂ ಕಬಳಿಕೆಯ ನಂಟು ಇದೆ. ಇಲ್ಲಿ ನಡೆದಿರುವ ಭೂ ಕಬಳಿಕೆ, ಅಕ್ರಮ ಒಕ್ಕಲೆಬ್ಬಿಸುವಿಕೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ, ದೌರ್ಜನ್ಯ ಮತ್ತು ಆತ್ಮಹತ್ಯೆ ಪ್ರಕರಣಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹೆಸರಿನಲ್ಲಿ ಜನರ ಧಾರ್ಮಿಕ ನಂಬಿಕೆಗಳನ್ನು ಹಣಕಾಸಿನ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಅನುಮತಿ ಇಲ್ಲದೇ ಅಗಾಧ ಪ್ರಮಾಣದ ಹಣಕಾಸಿನ ವ್ಯವಹಾರ ನಡೆಸಲಾಗುತ್ತಿದೆ. ದೇವರ ಹೆಸರಿನಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿರುವುದು ಖಂಡನೀಯ. ಇದಕ್ಕೆ ಸರ್ಕಾರ ಕಡಿವಾಣ ಹಾಕಿ, ಸಮಗ್ರ ತನಿಖೆ ನಡೆಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.