ADVERTISEMENT

ಮೊಹಮ್ಮದ್‌ ನಲಪಾಡ್‌ಗೆ ಮತ್ತೆ ಎಸ್‌ಐಟಿ ನೋಟಿಸ್‌

ಬಿಟ್‌ಕಾಯಿನ್‌ ಹಗರಣ: ವಿಶೇಷ ತನಿಖಾ ದಳದಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 15:39 IST
Last Updated 5 ಫೆಬ್ರುವರಿ 2025, 15:39 IST
ನಲಪಾಡ್‌ 
ನಲಪಾಡ್‌    

ಬೆಂಗಳೂರು: ಬಿಟ್‌ ಕಾಯಿನ್‌ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿಯ ವಿಶೇಷ ತನಿಖಾ ದಳದ (ಎಸ್ಐಟಿ) ತನಿಖಾಧಿಕಾರಿಗಳು, ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಅವರಿಗೆ ಫೆಬ್ರುವರಿ 7ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಪ್ರಕರಣದ ಸಂಬಂಧ ಇನ್ನೂ ಹೆಚ್ಚಿನ ವಿಚಾರಣೆ ಅಗತ್ಯವಿದ್ದು ಸಿಐಡಿ ಕಚೇರಿಗೆ ಬರುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಮೊಹಮ್ಮದ್‌ ನಲಪಾಡ್‌ ಅವರಿಗೆ ಜೂನ್‌ನಲ್ಲಿ ಮೊದಲ ಬಾರಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು. ಜೂನ್ 12ರಂದು ವಿಚಾರಣೆಗೆ ಹಾಜರಾಗಿದ್ದ ನಲಪಾಡ್‌ ಅವರು ತನಿಖಾಧಿಕಾರಿಗಳು ಕೇಳಿದ್ದ ಕೆಲವು ಪ್ರಶ್ನೆಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ಉತ್ತರ ನೀಡಿದ್ದರು. ಇದೀಗ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬಿಟ್​ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ನಲಪಾಡ್ ಆಪ್ತ ಎನ್ನಲಾಗಿದೆ. ತನಿಖೆ ವೇಳೆ ಲಭಿಸಿದ ಮಾಹಿತಿ ಆಧರಿಸಿ ಮೊಹಮ್ಮದ್ ನಲಪಾಡ್‌ ಅವರಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂಬುದು ಗೊತ್ತಾಗಿದೆ.  

‘ಗೇಮ್ ಆ್ಯಪ್‌ಗಳನ್ನು ಹ್ಯಾಕ್‌ ಮಾಡಿದ್ದ ಪ್ರಕರಣದಲ್ಲಿ ಶ್ರೀಕಿ ಜತೆಗೆ ನಲಪಾಡ್‌ ಅವರಿಗೆ ವ್ಯಾವಹಾರಿಕ ನಂಟಿತ್ತು ಎಂಬ ಅನುಮಾನವಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ಸಿಕ್ಕಿವೆ. ವಿಚಾರಣೆಯ ಬಳಿಕ ಮೊಹಮ್ಮದ್‌ ನಲಪಾಡ್‌ ಅವರನ್ನೂ ಈ ಪ್ರಕರಣದಲ್ಲಿ ಆರೋಪಿಯಾಗಿ ಪರಿಗಣಿಸಬಹುದೇ ಅಥವಾ ಬೇಡವೇ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ಆರೋಪಿಗಳು ಡಾರ್ಕ್‌ವೆಬ್ ಮೂಲಕ ವಿದೇಶಗಳಿಂದ ಮಾದಕ ವಸ್ತುಗಳನ್ನು ತರಿಸುತ್ತಿದ್ದರು. ಅದಕ್ಕಾಗಿ ಕ್ರಿಪ್ಟೊ ಕರೆನ್ಸಿ ಮತ್ತು ಬಿಟ್‌ಕಾಯಿನ್ ಮೂಲಕ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ಜತೆಗೆ, ತನಿಖೆಯಲ್ಲಿ ರಾಬಿನ್ ಖಂಡೇಲ್‌ವಾಲ ಜತೆ ಸೇರಿಕೊಂಡು ಕೆಲವು ಗೇಮ್ ಆ್ಯಪ್‌ಗಳನ್ನು ಹ್ಯಾಕ್ ಮಾಡಿ, ಅವುಗಳ ಮಾಲೀಕರಿಂದ ಹಣ ವಸೂಲಿ ಮಾಡಿದ್ದರು ಎಂಬುದು ಎಸ್‌ಐಟಿ ತನಿಖೆಯಿಂದ ಗೊತ್ತಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.