
ಬೆಂಗಳೂರು: ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭವಾಗಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ಸುತ್ತಮುತ್ತಲಿನ ರಸ್ತೆಗಳು ಜನಜಾತ್ರೆಯಿಂದ ಮುಳುಗಿಹೋಗಿವೆ. ಮೂರು ದಿನಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ.
ಬಸವನಗುಡಿ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ‘ಕಡಲೆಕಾಯಿ ಪರಿಷೆಯ’ ಸಂಭ್ರಮ ಮೂರು ದಿನದಿಂದ ತುಂಬಿ ತುಳುಕುತ್ತಿದೆ. ಈ ವರ್ಷ ಅಧಿಕೃತವಾಗಿಯೇ ಐದು ದಿನ ಪರಿಷೆಯನ್ನು ಧಾರ್ಮಿಕ ಪರಿಷತ್ ಆಯೋಜಿಸಿದೆ. ನ.17ರ ಸೋಮವಾರ ಪರಿಷೆ ಆರಂಭವಾಗಿದ್ದರೂ, ಶನಿವಾರದಿಂದಲೇ ಜಾತ್ರೆ ಸಡಗರ ಆರಂಭವಾಗಿತ್ತು.
ದೊಡ್ಡ ಬಸವಣ್ಣನೊಂದಿಗೆ ದೊಡ್ಡ ಗಣಪತಿ, ಕಾರಂಜಿ ಆಂಜನೇಯನ ದರ್ಶನ ಪಡೆದ ಜನರು ಜಾತ್ರೆಯ ಸೊಬಗನ್ನು ಸವಿದರು. ಸೋಮವಾರದಿಂದ ಬುಧವಾರದವರೆಗೆ ಬೆಳಿಗ್ಗೆಯಿಂದಲೂ ಜನರು ಪರಿಷೆಗೆ ಬಂದು ಕಡಲೆಕಾಯಿ ಖರೀದಿ ನಡೆಸಿದರು. ಸಂಜೆಯ ವೇಳೆಯಲ್ಲಿ ಕಾಲಿಡಲೂ ಸಾಧ್ಯವಿಲ್ಲದಷ್ಟು ಜನರಾಶಿ ಬಸವನಗುಡಿ ಮುಖ್ಯ ರಸ್ತೆಯಲ್ಲಿ ಕಂಡುಬಂದಿತು.
ಕಡಲಕಾಯಿ ಪರಿಷೆಯಲ್ಲಿ ಮೊದಲನೇ ಬಾರಿಗೆ ವಿಶೇಷ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ. ನಾರ್ತ್ ರೋಡ್, ಕೆ.ಆರ್. ರಸ್ತೆ, ಆಶ್ರಮ ವೃತ್ತ, ಡಿವಿಜಿ ರಸ್ತೆ, ಗಾಂಧಿ ಬಜಾರ್ ಮುಖ್ಯರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್ ರಸ್ತೆ, ಎನ್.ಆರ್. ಕಾಲೊನಿ ರಸ್ತೆಯಲ್ಲಿನ ದೀಪಾಲಂಕಾರ ವಿವಿಧ ವಯೋಮಾನದವರನ್ನೂ ಸೆಳೆಯಿತು.
ಪರಿಷೆಯಲ್ಲಿ ಈ ಬಾರಿ 4,500ಕ್ಕೂ ಮಳಿಗೆಗಳಿದ್ದು, ಪ್ರತಿದಿನವೂ ಬಿಬಿಎಂಪಿ ವತಿಯಿಂದ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಬೆಂಗಳೂರು ನಗರದ ನಿವಾಸಿಗಳಲ್ಲದೆ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಜನರು ಹೆಚ್ಚಾಗಿ ಬರುತ್ತಿದ್ದಾರೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪ್ರತಿದಿನವೂ ಬಸವನಗುಡಿ ಪ್ರದೇಶಕ್ಕೆ ಭೇಟಿ ನೀಡಿ, ವ್ಯವಸ್ಥೆಗಳ ಮೇಲೆ ನಿಗಾವಹಿಸುತ್ತಿದ್ದಾರೆ. ಪರಿಷೆ ನಡೆಯುತ್ತಿರುವ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಗೆ ಆದ್ಯತೆ ನೀಡಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ರಸ್ತೆಯ ಎರಡೂ ಬದಿಯ ಜೊತೆಗೆ ಮಧ್ಯಭಾಗದಲ್ಲೂ ಕಡಲೆಕಾಯಿಯನ್ನು ರಾಶಿರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ. ಹಸಿ, ಒಣ, ಬೇಯಿಸಿದ, ಹುರಿದ ಕಡಲೆಕಾಯಿ ಸೇರು ಲೆಕ್ಕಾಚಾರದಲ್ಲಿ ₹30ರಿಂದ ₹80ರವರೆಗೂ ದರ ನಿಗದಿಯಾಗಿತ್ತು. ನಾಲ್ಕಾರು ಬಗೆಯ ಕಡಲೆಕಾಯಿಯ ಆಕರ್ಷಣೆಯ ಜತೆಗೆ ಬೇಲ್, ಬಜ್ಜಿ, ಮಸಾಲ ಹಪ್ಪಳ, ಆಲೂ ಟ್ವಿಸ್ಟರ್ ಸೇರಿದಂತೆ ವಿವಿಧ ಭಕ್ಷ್ಯಗಳು, ಆಟಿಕೆ, ಜಗಮಗಿಸುವ ಬೆಳಕಿನಲ್ಲಿ ಆಟದ ಮೋಜು ಇಲ್ಲಿತ್ತು.
ಪ್ಲಾಸ್ಟಿಕ್ ಮುಕ್ತ: ‘ಕಡಲೆಕಾಯಿ ಖರೀದಿಗೆ ಪ್ಲಾಸ್ಟಿಕ್ ಚೀಲ ಕೊಡುವುದಿಲ್ಲ’ ಎಂದು ಮಾರಾಟಗಾರರು ಕಟ್ಟುನಿಟ್ಟಾಗಿ ಹೇಳುತ್ತಿದ್ದರು. ಅಕ್ಕಪಕ್ಕದಲ್ಲಿ ಬಟ್ಟೆ ಚೀಲಗಳನ್ನೂ ಮಾರಾಟ ಮಾಡಲಾಗುತ್ತಿತ್ತು. ‘ಪ್ಲಾಸ್ಟಿಕ್ ಮುಕ್ತ ಕಡಲೆಕಾಯಿ ಪರಿಷೆ’ ಎಂಬ ಫಲಕಗಳೂ ಇದ್ದವು. ಕಡಲೆಕಾಯಿ ಖರೀದಿಸಿ ಕೊಂಡೊಯ್ಯಲು ಹಲವು ಮಂದಿ ಬಟ್ಟೆಯ ಚೀಲಗಳನ್ನು ತಂದಿದ್ದರು.
ಕೋಟಿಗೂ ಹೆಚ್ಚು ವಹಿವಾಟು
ಬಸವನಗುಡಿಯ ಪರಿಷೆಯಲ್ಲಿ ಕಡಲೆಕಾಯಿ ಮಾರಾಟದ ವಹಿವಾಟು ಒಂದು ಕೋಟಿಗೂ ಹೆಚ್ಚಾಗಿದೆ ಎನ್ನಲಾಗಿದೆ. ಕಳೆದ ವರ್ಷಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಮಳಿಗೆಗಳಿದ್ದು ವ್ಯಾಪಾರವೂ ಚೆನ್ನಾಗಿ ಆಗಿದೆ. ಮಳಿಗೆಗೆ ಶುಲ್ಕ ಇಲ್ಲದ್ದರಿಂದ ಶುಕ್ರವಾರದಿಂದಲೇ ಸಾಕಷ್ಟು ಮಂದಿ ಮಳಿಗೆ ಪ್ರಾರಂಭಿಸಿದ್ದರು. ಕೋಲಾರ ಚಿಕ್ಕಬಳ್ಳಾಪುರ ತುಮಕೂರು ರಾಮನಗರ ಜಿಲ್ಲೆ ಸೇರಿದಂತೆ ತಮಿಳುನಾಡು ಆಂಧ್ರಪ್ರದೇಶದಿಂದ ಕಡಲೆಕಾಯಿ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ನೇರವಾಗಿ ರೈತರೇ ಮಾರಾಟ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರಲಿಲ್ಲ.
‘ಒಂದು ಕೋಟಿಗೂ ಹೆಚ್ಚು ರೂಪಾಯಿಗಳ ವಹಿವಾಟು ಪರಿಷೆಯಲ್ಲಿ ನಡೆದಿದೆ’ ಎಂದು ವ್ಯಾಪಾರಿ ಮೋಹನ್ ಚಂದ್ರು ಹೇಳಿದರು. ಬಿಲ್ ಅಥವಾ ಲೆಕ್ಕಾಚಾರದ ವ್ಯಾಪಾರವಲ್ಲದ್ದರಿಂದ ಇಷ್ಟೇ ವಹಿವಾಟು ನಡೆದಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.