ADVERTISEMENT

ಅಂಗವಿಕಲರಿಗೆ ಸಹಾಯದ ಹಸ್ತ ಚಾಚಿ: ಎಸ್.ಕೆ. ಶೇಷಚಂದ್ರಿಕ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 21:27 IST
Last Updated 16 ಡಿಸೆಂಬರ್ 2020, 21:27 IST

ಬೆಂಗಳೂರು: ‘ಅಂಗವಿಕಲರ ಬಗ್ಗೆ ಅನುಕಂಪ, ಸಹಾನುಭೂತಿ ತೋರುವ ಬದಲು ಸಹಾಯಹಸ್ತ ನೀಡಬೇಕು.ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕ ಅಭಿಪ್ರಾಯಪಟ್ಟರು.

ಭಾರತೀಯ ವಾಕ್‌ ಭಾಷೆ ಮತ್ತು ಶ್ರವಣ ಸಂಘವು (ಐಎಸ್‌ಎಚ್‌ಎ) ಆಯೋಜಿಸಿದ ‘ಅಂಗವಿಕಲರ ಕುರಿತ ಮನೋಭಾವವನ್ನು ಬದಲಾಯಿಸುವಲ್ಲಿ ಮಾಧ್ಯಮಗಳ ಪಾತ್ರ’ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಅಂಗವಿಕಲರು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾಧ್ಯಮಗಳು ಮುನ್ನೆಲೆಗೆ ತಂದು, ಪರಿಹಾರ ಕಲ್ಪಿಸಲು ಶ್ರಮಿಸುತ್ತಿವೆ. ಅಂಗವಿಕಲರ ಸಬಲೀಕರಣಕ್ಕೆ ಸರ್ಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಕೂಡ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇನ್ಫೊಸಿಸ್, ವಿಪ್ರೊ ಸೇರಿದಂತೆ ವಿವಿಧ ಸಂಸ್ಥೆಗಳು ಅಂಗವಿಕಲರಿಗೆ ನೆರವಾಗಲು ಉತ್ಸುಕವಾಗಿವೆ. ಅಂತಹ ಸಂಸ್ಥೆಗಳನ್ನು ಸಂಪರ್ಕಿಸಿ, ಸೌಲಭ್ಯಗಳನ್ನು ಒದಗಿಸಬೇಕು’ ಎಂದರು.

ADVERTISEMENT

ಆಕಾಶವಾಣಿಯ ಕಲಬುರ್ಗಿ ವಿಭಾಗದ ಕಾರ್ಯಕ್ರಮ ಕಾರ್ಯನಿರ್ವಾಹಕ ಡಾ.ಸದಾನಂದ ಪೆರ್ಲ, ‘ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶ್ರವಣ ಮತ್ತು ದೃಷ್ಟಿ ಸಮಸ್ಯೆ ಗುರುತಿಸುವಲ್ಲಿ ಕೆಲವೊಮ್ಮೆ ಪಾಲಕರು ವಿಫಲರಾಗುತ್ತಾರೆ. ಇನ್ನೂ ಕೆಲ ಪಾಲಕರು ಇವುಗಳನ್ನು ಕಡೆಗಣಿಸುತ್ತಾರೆ. ಮಕ್ಕಳು ದೊಡ್ಡವರಾದಂತೆ ಸಮಸ್ಯೆ ಸಂಕೀರ್ಣ ಸ್ವರೂಪ ಪಡೆಯುತ್ತದೆ. ಹಾಗಾಗಿ ಸಮಸ್ಯೆ ಗುರುತಿಸುವಿಕೆ, ಚಿಕಿತ್ಸೆ ಬಗ್ಗೆ ಅರಿವು ಮೂಡಿಸಬೇಕು’ ಎಂದು ವಿವರಿಸಿದರು.

ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ (ಎಐಐಎಸ್ಎಚ್) ಮಾಜಿ ನಿರ್ದೇಶಕ ಡಾ. ನಟೇಶ್ ರತ್ನಾ, ‘ಹಲವಾರು ಅಂಗವಿಕಲರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಸಿನಿಮಾ ಸೇರಿದಂತೆ ದೃಶ್ಯ ಮಾಧ್ಯಮಗಳು ಶ್ರವಣ ದೋಷ, ದೃಷ್ಟಿದೋಷದಂತಹ ಸಮಸ್ಯೆಯನ್ನು ಹಾಸ್ಯಾಸ್ಪದವಾಗಿ ತೋರಿಸಬಾರದು. ಬದಲಾಗಿ ಅವರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಪತ್ರಕರ್ತ ಈಶ್ವರ ದೈತೋಟ, ಅಪೋಲೊ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ.ಎನ್. ಶಿವಶಂಕರ್, ಡಾ.ಎಂ.ಎಸ್.ಜೆ. ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.