ADVERTISEMENT

ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ: ‘ಜಲ ಮರುಪೂರಣ ಕೊಳ’ ಕಾಂಕ್ರೀಟು ಮುಕ್ತ

ಕಬ್ಬನ್‌ ಉದ್ಯಾನದಲ್ಲಿರುವ ಕೊಳ l

ಮನೋಹರ್ ಎಂ.
Published 28 ಏಪ್ರಿಲ್ 2022, 18:59 IST
Last Updated 28 ಏಪ್ರಿಲ್ 2022, 18:59 IST
ಕಬ್ಬನ್ ಉದ್ಯಾನದಲ್ಲಿರುವ ‘ಜಲ ಮರುಪೂರಣ ಕೊಳ’ -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ಕಬ್ಬನ್ ಉದ್ಯಾನದಲ್ಲಿರುವ ‘ಜಲ ಮರುಪೂರಣ ಕೊಳ’ -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು: ಕಬ್ಬನ್‌ ಉದ್ಯಾನದ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಇರುವ ಒಣ ಕೊಳ (ಡ್ರೈ ಪಾಂಡ್‌) ಈಗ ‘ಜಲ ಮರುಪೂರಣ ಕೊಳ’ವಾಗಿ ಹೊಸರೂಪ ಪಡೆದಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿಕಾಂಕ್ರೀಟು ಮುಕ್ತವಾಗಿ ಕೊಳದ ಕಾಮಗಾರಿ ಪೂರ್ಣಗೊಂಡಿದೆ.

ಸ್ಮಾರ್ಟ್‌ಸಿಟಿ ಯೋಜನೆಯ ಎರಡನೇ ಹಂತದಲ್ಲಿ ಈ ಕೊಳವೂ ಸೇರಿದಂತೆಉದ್ಯಾನದಲ್ಲಿರುವ ಮೂರು ಕೊಳಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಒಣ ಕೊಳದ ಕಾಮಗಾರಿ ಮುಗಿದಿದೆ.

ಕಮಲ ಕೊಳದ ಕಾಮಗಾರಿಯೂ ಚುರುಕಾಗಿದ್ದು, ಶೀಘ್ರದಲ್ಲೇ ಅಂತಿಮ ರೂಪ ಪಡೆಯಲಿದೆ. ಕರಗದ ಕುಂಟೆಯ ಕೆಲಸಗಳು ಆನಂತರ ಆರಂಭವಾಗಲಿವೆ.

ADVERTISEMENT

‘ಕಬ್ಬನ್‌ ಉದ್ಯಾನದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಈ ಕೊಳ ಹೆಚ್ಚು ಸಹಕಾರಿಯಾಗಿದೆ.‌ಮೂರು ತಿಂಗಳಲ್ಲಿ ಕೊಳದ ಕಾಮಗಾರಿ ಪೂರ್ಣಗೊಂಡಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಉದ್ಯಾನ) ಎಚ್.ಟಿ.ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ವರ್ಷವೂ ಮಳೆಗಾಲದಲ್ಲಿ ಮಳೆ ನೀರಿನಿಂದ ಕೊಳ ಭರ್ತಿಯಾಗುತ್ತದೆ. ಬೇಸಿಗೆ ವೇಳೆಗೆ ನೀರು ಭೂಮಿಗೆ ಇಂಗುವ ಮೂಲಕ ಕೊಳ ಒಣಗುತ್ತದೆ. ಈ ಕಾರಣದಿಂದಲೇ ಇದನ್ನು ‘ಒಣ ಕೊಳ’ ಎಂದೇ ಕರೆಯಲಾಗುತ್ತದೆ’ ಎಂದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಕೊಳಗಳ ಅಭಿವೃದ್ಧಿ ಹೊಣೆ ಹೊತ್ತಿರುವ ನೇಚರ್ ಫರ್ಸ್ಟ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಂಚಾಕ್ಷರಿ ಹಿರೇಮಠ, ‘ಕೊಳದ ಮೂಲ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೊಳವನ್ನು ಅಂದಗೊಳಿಸುವ ಕೆಲಸವನ್ನಷ್ಟೇ ಮಾಡಿದ್ದೇವೆ. ಕಾಂಕ್ರೀಟು ಮುಕ್ತ
ವಾಗಿ ಕೊಳದ ಕಾಮಗಾರಿ ಪೂರ್ಣಗೊಳಿಸಿರುವುದು ವಿಶೇಷ’ ಎಂದರು.

‘ಕೊಳದಲ್ಲಿ ಸಂಗ್ರಹವಾಗಿದ್ದ ಹೂಳು ತೆರವು ಮಾಡಲಾಗಿದೆ. ಕಾಮಗಾರಿಯಿಂದಾಗಿ ಕೊಳದಲ್ಲಿ ಹೆಚ್ಚು ನೀರು ಸಂಗ್ರಹಗೊಳ್ಳಲಿದೆ. ನೀರಿನ ಮರುಪೂರಣ ಪ್ರಕ್ರಿಯೆಗೂ ಪೂರಕವಾಗಿದ್ದು, ಇದನ್ನು ಕಬ್ಬನ್ ಉದ್ಯಾನದ ನೀರು ಇಂಗಿಸುವ ಬೃಹತ್ ಗುಂಡಿ ಎನ್ನಬಹುದು’ ಎಂದು ಅವರು ಹೇಳಿದರು.

‘ಕೊಳದ ಸುತ್ತ 13ಕ್ಕೂ ಹೆಚ್ಚು ಬಗೆಯ ಹೂವಿನ ಸಸಿಗಳು ಹಾಗೂ ತರಹೇವಾರಿ ಅಲಂಕಾರಿಕ ಸಸಿಗಳನ್ನು ನೆಟ್ಟಿದ್ದೇವೆ. ಕೊಳದ ಬಳಿ ಇರುವ ಮರಗಳಿಗೆ ಪರ್ಯಾಯವಾಗಿ 12ಕ್ಕೂ ಹೆಚ್ಚು ಮರಗಳನ್ನು ನೆಡಲಾಗಿದೆ. ಕೊಳದ ಸುತ್ತಲಿನ ಭಾಗವನ್ನು ಹುಲ್ಲುಹಾಸು ಮತ್ತು ಕಲ್ಲುಗಳಿಂದಲೇ ನೈಸರ್ಗಿಕವಾಗಿ ಅಂದಗೊಳಿಸಿ
ದ್ದೇವೆ.ಅಂದಾಜು ₹20 ಲಕ್ಷ ವೆಚ್ಚದಲ್ಲಿ ಕೊಳದ ಕಾಮಗಾರಿ ಪೂರ್ಣಗೊಂಡಿದೆ’ ಎಂದರು.

ಗಿಡಗಳಿಂದಲೇ ರಕ್ಷಣಾ ಬೇಲಿ: ‘ಕೊಳದ ಸುತ್ತಲೂ ರಕ್ಷಣೆಗಾಗಿ ಗಿಡಗಳಿಂದಲೇ ಬೇಲಿ ನಿರ್ಮಿಸುವ ‘ಬಯೋ ಫೆನ್ಸ್‌’ ವಿಧಾನವನ್ನು ಇಲ್ಲಿ ಅನುಸರಿಸಿದ್ದೇವೆ. ತಂತಿ ಬೇಲಿಯಿಂದ ಅಡಚಣೆ ಹೆಚ್ಚು. ಈ ಕಾರಣದಿಂದ ವಿಶೇಷ ಗಿಡಗಳನ್ನೇ ಬೇಲಿಯ ರೀತಿಯಲ್ಲಿ ಬೆಳೆಸಲಾಗುವುದು. ಇವು ರಕ್ಷಣಾತ್ಮಕವಾಗಿಯೂ ಇರುವುದಲ್ಲದೆ, ನೈಸರ್ಗಿಕವಾಗಿಯೂ ಕಾಣುತ್ತದೆ’ ಎಂದುಹಿರೇಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.