ADVERTISEMENT

‘ಸಾಮಾಜಿಕ ಕಳಕಳಿ–ಪುನೀತ್‌ ಮೇಲ್ಪಂಕ್ತಿ’

ಈಡಿಗರ ಸಂಘದಿಂದ ‘ಪುನೀತ್ ಸ್ಮರಣಾಂಜಲಿ’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 16:28 IST
Last Updated 5 ಡಿಸೆಂಬರ್ 2021, 16:28 IST
ಪುನೀತ್‌ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಟ ಶಿವರಾಜ್‌ ಕುಮಾರ್, ದಿವಂಗತ ರಾಜ್‌ಕುಮಾರ್‌ ಅವರ ಹಿರಿಯ ಪುತ್ರಿ ಲಕ್ಷ್ಮಿ ಮತ್ತು ನಿರ್ಮಾಪಕ ಗೋವಿಂದರಾಜು ದಂಪತಿ, ವಿಖ್ಯಾತಾನಂದ ಸ್ವಾಮೀಜಿ, ನಟಿ ಜಯಮಾಲಾ, ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ನಿರ್ಮಾಪಕ ಎಸ್‌.ಎ.ಚಿನ್ನೇಗೌಡ, ವಾಸಣ್ಣ ಹಾಗೂ ಸಮುದಾಯದ ಮುಖಂಡರು ಇದ್ದಾರೆ –ಪ್ರಜಾವಾಣಿ ಚಿತ್ರ
ಪುನೀತ್‌ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಟ ಶಿವರಾಜ್‌ ಕುಮಾರ್, ದಿವಂಗತ ರಾಜ್‌ಕುಮಾರ್‌ ಅವರ ಹಿರಿಯ ಪುತ್ರಿ ಲಕ್ಷ್ಮಿ ಮತ್ತು ನಿರ್ಮಾಪಕ ಗೋವಿಂದರಾಜು ದಂಪತಿ, ವಿಖ್ಯಾತಾನಂದ ಸ್ವಾಮೀಜಿ, ನಟಿ ಜಯಮಾಲಾ, ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ನಿರ್ಮಾಪಕ ಎಸ್‌.ಎ.ಚಿನ್ನೇಗೌಡ, ವಾಸಣ್ಣ ಹಾಗೂ ಸಮುದಾಯದ ಮುಖಂಡರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಸಮಾಜದಿಂದ ನಮಗೆ ಏನು ಸಿಕ್ಕಿದೆ ಎಂದು ಎಲ್ಲರೂ ಕೇಳುತ್ತಾರೆ. ಆದರೆ, ಸಮಾಜಕ್ಕೆ ನಾವೇನು ಮಾಡಿದ್ದೇವೆ ಎನ್ನುವುದು ಬಹಳ ಮುಖ್ಯ. ಅದಕ್ಕೆ ಪುನೀತ್‌ ಉತ್ತಮ ಉದಾಹರಣೆಯಾಗಿದ್ದ. ಅಂತಹ ತಮ್ಮನನ್ನು ಕಳೆದುಕೊಂಡ ನೋವು ನನ್ನನ್ನು ಸದಾ ಕಾಡುತ್ತದೆ’ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದರು.

ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘವುಶೇಷಾದ್ರಿಪುರದಲ್ಲಿರುವ ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪುನೀತ್‌ ಸ್ಮರಣಾಂಜಲಿ’ ಕಾರ್ಯಕ್ರಮದಲ್ಲಿ ಅವರು ಭಾವುಕರಾಗಿ ಮಾತನಾಡಿದರು.

‘ಪುನೀತ್‌ ನನ್ನನ್ನು ಪ್ರೀತಿಯಿಂದ ಶಿವಣ್ಣ ಎಂದೇ ಕರೆಯುತ್ತಿದ್ದ.ಚಿಕ್ಕಂದಿನಿಂದಲೂ ಕೆಲಸದವರನ್ನು ತನ್ನ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಂಡಿದ್ದ.ಪುನೀತ್‌ ಮತ್ತು ನಾನು ಎಂದೂ ಜಗಳ ಆಡಿಲ್ಲವೇ ಎಂದು ಹಲವರು ಕೇಳುತ್ತಲೇ ಇದ್ದರು. ಪುನೀತ್‌ ಜೊತೆಗೆ ಜಗಳವಾಡುವ ಪರಿಸ್ಥಿತಿಯೇ ಬರಲಿಲ್ಲ. ಜಗಳವಾಡಿದ ನೆನಪೂ ಇಲ್ಲ. ಪುನೀತ್‌ ಅಂತಹ ವ್ಯಕ್ತಿಯಾಗಿದ್ದ’ ಎಂದು ಸ್ಮರಿಸಿದರು.

ADVERTISEMENT

ನಟಿ ಜಯಮಾಲಾ, ‘ಜಗತ್ತು ಮೆಚ್ಚುವಂತಹ ಕೆಲಸಗಳನ್ನು ಮಾಡಿರುವ ಪುನೀತ್‌ಗೆ‘ದಾದಾಸಾಹೇಬ್‌ ಫಾಲ್ಕೆ ‍ಪ್ರಶಸ್ತಿ’ ನೀಡಬೇಕು. ಇದರಿಂದ ಫಾಲ್ಕೆ ಪ್ರಶಸ್ತಿಯ ಗೌರವ ಹೆಚ್ಚಲಿದೆ’ ಎಂದು ಒತ್ತಾಯಿಸಿದರು.

ನಟರಾದ ಶ್ರೀಮುರಳಿ ಹಾಗೂ ವಿಜಯ ರಾಘವೇಂದ್ರ ಅವರು ರಾಜಕುಮಾರ ಚಿತ್ರದ ‘ಬೊಂಬೆ ಹೇಳುತೈತೆ’ ಗೀತೆಯನ್ನು ಹಾಡುವ ಮೂಲಕ ಗೀತನಮನ ಸಲ್ಲಿಸಿದರು. ವಿಖ್ಯಾತಾನಂದ ಸ್ವಾಮೀಜಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ನಿರ್ಮಾಪಕ ಎಸ್‌.ಎ.ಚಿನ್ನೇಗೌಡ ಮಾತನಾಡಿದರು.

ನೇತ್ರದಾನಕ್ಕೆ ನೋಂದಣಿ: ಕಾರ್ಯಕ್ರಮದ ಅಂಗವಾಗಿ ಬಿಡದಿಯ ಡಾ.ರಾಜ್‌ಕುಮಾರ್‌ ನೇತ್ರ ಸಂಗ್ರಹಣಾ ಕೇಂದ್ರ ಹಾಗೂ ವೈಟ್‌ಫೀಲ್ಡ್‌ನ ಶಂಕರ ಕಣ್ಣಿನ ಆಸ್ಪತ್ರೆಗಳ ಸಹಯೋಗದಲ್ಲಿ ನೇತ್ರದಾನ ನೋಂದಣಿ ಹಾಗೂ ಲಯನ್ಸ್‌ ಕ್ಲಬ್‌ ವತಿಯಿಂದ ರಕ್ತದಾನ ಶಿಬಿರ ನಡೆಯಿತ್ತು. 121 ಮಂದಿ ಸ್ವಯಂಪ್ರೇರಿತವಾಗಿ ನೇತ್ರದಾನಕ್ಕೆ ನೋಂದಣಿ ಮಾಡಿದರು. ‘ರಕ್ತದಾನ ಶಿಬಿರದಲ್ಲಿ 40 ಯೂನಿಟ್‌ಗಳಷ್ಟು ರಕ್ತ ಸಂಗ್ರಹವಾಗಿದ್ದು, ಇದು 120 ಜನರಿಗೆ ನೆರವಾಗಲಿದೆ’ ಎಂದು ಶಿಬಿರದ ಆಯೋಜಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.