
ಬೆಂಗಳೂರು: ‘ಕ್ಯಾನ್ಸರ್ ಪೀಡಿತರಿಗೆ ವೈದ್ಯಕೀಯ ಚಿಕಿತ್ಸೆ ಜತೆಗೆ ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲ ಮುಖ್ಯ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿರ್ದೇಶಕ ಡಾ.ಟಿ.ನವೀನ್ ಅಭಿಪ್ರಾಯಪಟ್ಟರು.
ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನದ ಅಂಗವಾಗಿ ಸಂಸ್ಥೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
‘ಯಾವುದೇ ಶಂಕಿತ ಕ್ಯಾನ್ಸರ್ ಗಡ್ಡೆ ಹಾಗೂ ರೋಗ ಲಕ್ಷಣ ಕಾಣಿಸಿಕೊಂಡರೆ ಮಕ್ಕಳನ್ನು ತಪಾಸಣೆಗೆ ಒಳಪಡಿಸಬೇಕು. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿದರೆ ಬೇಗ ಗುಣಪಡಿಸಲು ಸಾಧ್ಯ. ತಡವಾಗಿ ತಪಾಸಣೆಗೆ ಒಳಪಡಿಸಿ, ಚಿಕಿತ್ಸೆ ನೀಡಿದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ’ ಎಂದರು.
‘ಇತ್ತೀಚಿನ ವರ್ಷಗಳಲ್ಲಿ ತಪಾಸಣೆಯೂ ಹೆಚ್ಚುತ್ತಿರುವುದರಿಂದ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದೃಢಪಡುತ್ತಿವೆ. ಒಂದು ವಾರಕ್ಕೂ ಹೆಚ್ಚು ಜ್ವರವಿದ್ದರೆ, ಎರಡು ವಾರಕ್ಕೂ ಹೆಚ್ಚು ಕುತ್ತಿಗೆ ಭಾಗದಲ್ಲಿ ಊತ ಕಂಡುಬಂದರೆ, ಅನಿಯಂತ್ರಿತ ರಕ್ತಸ್ರಾವ, ಹೊಟ್ಟೆ ಅಥವಾ ದೇಹದ ಯಾವುದೇ ಭಾಗದಲ್ಲಿ ಗಡ್ಡೆ ಅಥವಾ ಊತ ಕಾಣಿಸಿಕೊಂಡರೆ, ಪದೇ ಪದೇ ವಾಂತಿ ಮತ್ತು ತಲೆನೋವು ಇದ್ದರೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು’ ಎಂದು ಹೇಳಿದರು.
‘ಕ್ಯಾನ್ಸರ್‌ಗೆ ತುತ್ತಾದ ಮಕ್ಕಳಿಗೆ ಚಿಕಿತ್ಸೆ ಹಾಗೂ ಆರೈಕೆಗೆ ಸಂಸ್ಥೆಯು ಪ್ರತ್ಯೇಕ ಮಕ್ಕಳ ಗಂಥಿ ವಿಜ್ಞಾನ ವಿಭಾಗ ಹೊಂದಿದೆ. ಈ ರೋಗದ ಬಗ್ಗೆ ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲೂ ಸಾರ್ವಜನಿಕರಿಗೆ ಶಿಬಿರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.
ಸಂಸ್ಥೆಯ ನಿವಾಸಿ ವೈದ್ಯಾಧಿಕಾರಿ ಡಾ.ಕೃಷ್ಣಪ್ಪ, ವೈದ್ಯ ಡಾ.ಅರುಣ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.