ADVERTISEMENT

ಲೈಂಗಿಕ ಅಲ್ಪಸಂಖ್ಯಾತರ ಒಪ್ಪಿಕೊಳ್ಳದ ಸಮಾಜ: ನ್ಯಾಯಮೂರ್ತಿ ಎಚ್‌.ಎಲ್.ದತ್ತು ಬೇಸರ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:09 IST
Last Updated 26 ಫೆಬ್ರುವರಿ 2020, 19:09 IST
ಎನ್‌ಎಲ್‌ಎಸ್‌ಐಯು ಕುಲಸಚಿವೆ ಸರಸು ಎಸ್ತರ್ ಥಾಮಸ್‌, ನ್ಯಾ.ಎನ್.ಕುಮಾರ್, ನ್ಯಾ.ಎಚ್‌.ಎಲ್.ದತ್ತು ಹಾಗೂ ಆಯೋಗದ ಸದಸ್ಯೆ ಜ್ಯೋತಿಕಾ ಕಲ್ರಾ ಅವರು ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಸಮಾಲೋಚನೆ ನಡೆಸಿದರು – ಪ್ರಜಾವಾಣಿ ಚಿತ್ರ
ಎನ್‌ಎಲ್‌ಎಸ್‌ಐಯು ಕುಲಸಚಿವೆ ಸರಸು ಎಸ್ತರ್ ಥಾಮಸ್‌, ನ್ಯಾ.ಎನ್.ಕುಮಾರ್, ನ್ಯಾ.ಎಚ್‌.ಎಲ್.ದತ್ತು ಹಾಗೂ ಆಯೋಗದ ಸದಸ್ಯೆ ಜ್ಯೋತಿಕಾ ಕಲ್ರಾ ಅವರು ಲೈಂಗಿಕ ಅಲ್ಪಸಂಖ್ಯಾತರೊಂದಿಗೆ ಸಮಾಲೋಚನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ನ್ಯಾಯಾಲಯಗಳು ಎತ್ತಿಹಿಡಿದಿವೆ. ಆದರೆ, ಜನರ ಮನಸ್ಥಿತಿ ಹಾಗೂ ಸರ್ಕಾರದ ಜಡ ಧೋರಣೆಗಳು ಹಕ್ಕುಗಳ ಅನುಷ್ಠಾನಕ್ಕೆ ತೊಡಕಾಗಿವೆ’ ಎಂದುರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಚ್‌.ಎಲ್‌.ದತ್ತು ಬೇಸರ ವ್ಯಕ್ತಪಡಿಸಿದರು.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ಸಹಯೋಗದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳು: ಸವಾಲುಗಳು ಮತ್ತು ಮುಂದಿನ ದಾರಿ’ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಕೆಲ ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಆರೋಪಿಗಳ ದೃಷ್ಟಿಯಲ್ಲಿ ನೋಡಲಾಗುತ್ತಿದೆ. ಅವರಿಗೆ ಸ್ವಾಭಿಮಾನದ ಜೀವನ ನಡೆಸಲೂ ಅವಕಾಶಗಳನ್ನು ನೀಡುತ್ತಿಲ್ಲ. ಇಲ್ಲಿಯೂ ಅವರನ್ನು ಸೂಕ್ತವಾಗಿ ನಡೆಸಿಕೊಂಡಿರಲಿಲ್ಲ. ನವತೇಜ್‌ಸಿಂಗ್ ಜೋಹರ್ ಮತ್ತು ಇತರರ ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಚರಿತ್ರಾರ್ಹ. ಭಾರತೀಯ ದಂಡ ಸಂಹಿತೆಯ 377ನೇ ಪರಿಚ್ಛೇದದ ವ್ಯಾಪ್ತಿಯಿಂದ ಸಮಲೈಂಗಿಕ ಸಂಬಂಧವನ್ನು ಮುಕ್ತಗೊಳಿಸಿತ್ತು. ಈ ತೀರ್ಪು ಸಲಿಂಗಿಗಳು, ದ್ವಿಲಿಂಗಿಗಳು ಹಾಗೂ ಲಿಂಗಪರಿವರ್ತಿತರ ಸಮುದಾಯಕ್ಕೆ ಸಂತೋಷವನ್ನುಂಟು ಮಾಡಿತ್ತು. ಆದರೆ, ಇಂತಹ ತೀರ್ಪುಗಳು ಕೇವಲ ನ್ಯಾಯಪುಸ್ತಕದಲ್ಲಷ್ಟೇ ಉಳಿದುಕೊಳ್ಳುತ್ತಿವೆ’ ಎಂದು ಹೇಳಿದರು.

ADVERTISEMENT

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಮಾತನಾಡಿ, ‘ಭಾರತೀಯ ಸಂವಿಧಾನದ ಪೀಠಿಕೆಯು ದೇಶದಲ್ಲಿ ವಾಸಿಸುವ ಎಲ್ಲರಿಗೂ ಸಮಾನತೆ ನೀಡಿದೆ. ಮಹಿಳೆ, ಪುರುಷ ಎಂಬಂತಹ ಯಾವುದೇ ತಾರತಮ್ಯ ಮಾಡಿಲ್ಲ. ಲಿಂಗತ್ವ ಅಲ್ಪಸಂಖ್ಯಾತರು ಜನರಿಂದ ದೂರವಾಗಿ ಬದುಕಬಾರದು. ಆಗಲೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರಲಿದೆ’ ಎಂದರು.

‘ಚರ್ಚಿಸದೇ ಮಸೂದೆಗೆ ಅಂಗೀಕಾರ’

‘ಭಾರತೀಯ ದಂಡ ಸಂಹಿತೆಯ 377ನೇ ಪರಿಚ್ಛೇದದ ಅಡಿ ನಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿತ್ತು. ಸುಪ್ರೀಂ ಕೋರ್ಟ್‌ ನಮ್ಮ ಪರವಾಗಿ ತೀರ್ಪು ನೀಡಿರುವುದರಿಂದ ಹೋರಾಟಗಳಿಗೆ ಇನ್ನಷ್ಟು ಬಲ ಬಂದಿದೆ.ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣಾ ಮಸೂದೆ-2019ರ ಬಗ್ಗೆ ಚರ್ಚೆ ನಡೆಸದೆಯೇ ಸಂಸತ್ತಿನಲ್ಲಿ ಪಾಸು ಮಾಡಲಾಗಿದೆ. ಇದು ನಮ್ಮ ಹಕ್ಕುಗಳನ್ನು ದಮನ ಮಾಡಲಿದೆ. ಹಾಗಾಗಿ, ಇದನ್ನು ಮರುಪರಿಶೀಲಿಸಬೇಕು’ ಎಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.