ADVERTISEMENT

ಅಲ್ಪಾಯುಷಿ ಎಂದ ಜ್ಯೋತಿಷಿ: ಹೆದರಿ ಸಾಫ್ಟ್‌ವೇರ್‌ ಉದ್ಯೋಗಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 16:16 IST
Last Updated 28 ಫೆಬ್ರುವರಿ 2026, 16:16 IST
ವಿದ್ಯಾ ಜ್ಯೋತಿ
ವಿದ್ಯಾ ಜ್ಯೋತಿ   

ಪೀಣ್ಯ ದಾಸರಹಳ್ಳಿ: ಎಂಇಐ ಬಡಾವಣೆಯಲ್ಲಿ ವಾಸವಿದ್ದ ಸಾಫ್ಟ್‌ವೇರ್‌ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದ್ಯಾಜ್ಯೋತಿ (29) ಮೃತ ಯುವತಿ. ತಂದೆ ಉಮೇಶ್ ಎಂಬುವರು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ ಠಾಣೆ ಪೊಲೀಸರು ಯುಡಿಆರ್ (ಅಸಹಜ ಸಾವು ಪ್ರಕರಣ) ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

‘ನೀನು ಅಲ್ಪಾಯುಷಿ’ ಎಂದು ಜ್ಯೋತಿಷಿ ಹೇಳಿದ್ದರಿಂದ ಹೆದರಿ, ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. 

ADVERTISEMENT

ಕೋರಮಂಗಲದ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ವಿದ್ಯಾ, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಲು ತಂದೆ-ತಾಯಿಯನ್ನು ಒಪ್ಪಿಸಿದ್ದರು. ಇದೇ ವೇಳೆ ಜ್ಯೋತಿಷಿಯೊಬ್ಬರು ಭವಿಷ್ಯ ಹೇಳಿದ್ದರು. ‘ಮದುವೆಯಾದ 2 ವರ್ಷ ಮಾತ್ರ ಸಂಸಾರ ಚೆನ್ನಾಗಿರುತ್ತದೆ. ನಂತರ ತೊಂದರೆಯಾಗಲಿದೆ. ಅದಕ್ಕಾಗಿ 9 ದಿನ ಪೂಜೆ ಮಾಡಿಸಬೇಕು’ ಎಂದಿದ್ದರು.

ಜ್ಯೋತಿಷಿ ಮಾತು ಕೇಳಿ 9 ದಿನ ಮಾರಮ್ಮ ದೇವಿ ಪೂಜೆ ಮಾಡಿದ್ದರು. ಕೊನೆ ದಿನ ಶುಕ್ರವಾರ ಪೂಜೆ ಮಾಡಿಸಿ ದೇವಿಗೆ ತಾಳಿ ಸಮರ್ಪಿಸಬೇಕಾಗಿತ್ತು. ಪೂಜೆಗೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಯುವತಿ ಕೊಠಡಿಗೆ ತೆರಳಿ, ರಾತ್ರಿಯಾದರೂ ಬಾಗಿಲು ತೆರೆದಿರಲಿಲ್ಲ.  

ಪೂಜೆ ತಡವಾಗುತ್ತಿರುವ ಪರಿಣಾಮ ತಾಯಿ ಮಗಳನ್ನು ಕರೆಯಲು ಹೋಗಿದ್ದಾರೆ. ಬಾಗಿಲು ಬಡಿದರೂ ತೆರೆಯದ ಕಾರಣ ಕಿಟಕಿಯಿಂದ ನೋಡಿದಾಗ, ಮಗಳು ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಗಲಗುಂಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.  

‘ಸಾಫ್ಟ್‌ವೇರ್ ಎಂಜಿನಿಯರ್ ವಿದ್ಯಾ ಜ್ಯೋತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.