
ಮಣ್ಣು
ಬೆಂಗಳೂರು: ‘ಅತಿಯಾದ ನಗರೀಕರಣ ಮತ್ತು ಕೈಗಾರಿಕಾ ಪ್ರದೇಶಗಳ ಹೆಚ್ಚಳದಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತಿದೆ. ಮಣ್ಣಿನಲ್ಲಿ ಸಾವಯವ ಅಂಶ ಕಡಿಮೆಯಾಗುತ್ತಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಆರೋಗ್ಯಕರ ನಗರಗಳಿಗೆ ಆರೋಗ್ಯಕರ ಮಣ್ಣು ಎಂಬ ಘೋಷವಾಕ್ಯದೊಂದಿಗೆ ಮಣ್ಣಿನ ದಿನವನ್ನು ಈ ಬಾರಿ ಆಚರಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ತ್ಯಾಜ್ಯ ಪದಾರ್ಥಗಳು ಸರಿಯಾಗಿ ವಿಲೇವಾರಿಯಾಗದೇ ಭಾರಿ ಲೋಹ ಹಾಗೂ ಮೈಕ್ರೋ ಪ್ಲಾಸ್ಟಿಕ್ ಅಂಶಗಳು ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ನಗರ ಪರಿಸರದ ವೈಭವವು ಮಣ್ಣಿನ ಆರೋಗ್ಯದಿಂದ ಕೂಡಿದೆ. ನಾಗರಿಕರು ನಗರದ ಮಣ್ಣು ಹಾಗೂ ಪರಿಸರದ ನಿರ್ವಹಣೆಗೆ ಹೆಚ್ಚು ಆದ್ಯತೆ ನೀಡಬೇಕು’ ಎಂದರು.
‘ಇಂದಿನ ಪೀಳಿಗೆಯ ಮಂದಿ ಹೆಚ್ಚು ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ ಮಾಡುವ ಮೂಲಕ ಮಣ್ಣಿನಲ್ಲಿರುವ ಫಲವತ್ತತೆಯನ್ನು ಹಾಳು ಮಾಡುತ್ತಿದ್ದಾರೆ. ಇದು ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ’ ಎಂದರು.
ಮಣ್ಣಿನ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ವಸ್ತುಪ್ರದರ್ಶನ ಹಾಗೂ ಬೀದಿ ನಾಟಕ ಏರ್ಪಡಿಸಲಾಯಿತು. ಮಣ್ಣಿನ ಮಾದರಿ ತೆಗೆಯುವ ವಿಧಾನ, ವೈಜ್ಞಾನಿಕವಾಗಿ ಮನೆಯಲ್ಲಿ ಕಾಂಪೋಸ್ಟ್ ತಯಾರಿಕೆ, ಚಾವಣಿ ಮಳೆನೀರು ಸಂಗ್ರಹ ಪದ್ಧತಿ, ತ್ಯಾಜ್ಯ ವಿಂಗಡಣೆ ಕುರಿತು ಪ್ರಾತ್ಯಕ್ಷತೆ, ಜೈವಿಕ ಗೊಬ್ಬರದ ಬಳಕೆ ಬಗ್ಗೆ ಅರಿವು ಮೂಡಿಸಲಾಯಿತು.
ತೋಟಗಾರಿಕೆ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಎಂ. ಪರಶಿವಮೂರ್ತಿ, ವಿಶ್ವವಿದ್ಯಾಲಯ ಡೀನ್ ಎನ್.ಬಿ. ಪ್ರಕಾಶ್, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎ.ಬಿ. ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.