ADVERTISEMENT

ಅಂಗವಿಕಲರಿಗೆ ‘ಸೋಲಾರ್‌ ಟ್ರೈಸಿಕಲ್‌’

ಎಪಿಎಸ್‌ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳಿಂದ ವಾಹನ ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 18:50 IST
Last Updated 29 ಜೂನ್ 2019, 18:50 IST
ಅಂಗವಿಕಲರಿಗಾಗಿ ಸಿದ್ಧಪಡಿಸಿದ ಸೋಲಾರ್‌ ಟ್ರೈಸಿಕಲ್‌
ಅಂಗವಿಕಲರಿಗಾಗಿ ಸಿದ್ಧಪಡಿಸಿದ ಸೋಲಾರ್‌ ಟ್ರೈಸಿಕಲ್‌   

ಬೆಂಗಳೂರು: ಅಂಗವಿಕಲರಿಗಾಗಿ ಸೌರ ಶಕ್ತಿ ಅಥವಾ ವಿದ್ಯುತ್‌ ಶಕ್ತಿಯಿಂದ ಸಂಚರಿಸುವ ಪರಿಸರ ಸ್ನೇಹಿ ಹೈಬ್ರಿಡ್‌ ತ್ರಿಚಕ್ರ ವಾಹನವನ್ನು (ಟ್ರೈಸಿಕಲ್‌) ಎಪಿಎಸ್‌ ಎಂಜಿನಿಯರಿಂಗ್‌ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದಾರೆ.

ಅಂಗವಿಕಲರು ಯಾರ ಸಹಾಯವಿಲ್ಲದೆಯೇ ತಮ್ಮ ಕೆಲಸ ನಿರ್ವಹಿಸಲು ಈ ವಾಹನ ಅನುಕೂಲ ಕಲ್ಪಿಸಲಿದೆ. ತಮ್ಮ ದೈನಂದಿನ ಕೆಲಸ, ಶಿಕ್ಷಣ, ಶಾಪಿಂಗ್‌ ಮುಂತಾದ ಚಟುವಟಿಕೆಗಳಿಗೆ ಓಡಾಡಲು ಇದು ನೆರವಾಗಲಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ದಿನ ದಿನಕ್ಕೂ ಏರಿಕೆ ಯಾಗುತ್ತಿರುವ ಈ ಹೊತ್ತಿನಲ್ಲಿ, ಈ ವಾಹನ ಆರ್ಥಿಕ ಹೊರೆ ತಗ್ಗಿಸಲಿದೆ.

‘ಈ ತ್ರಿಚಕ್ರ ವಾಹನವು ಹಲವು ವಿಶೇಷತೆಗಳನ್ನು ಹೊಂದಿದೆ. ಕಡಿಮೆ ತೂಕ ಹೊಂದಿರುವ ಈ ವಾಹನವನ್ನು ಹೆಚ್ಚು ಶ್ರಮವಿಲ್ಲದೆ ಓಡಿಸಬಹುದು. ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಮಾಡ್ಯೂಲ್‌ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್‌ ಘಟಕಗಳಾದ ಡಯೋಡ್‌, ರೆಸಿಸ್ಟರ್‌, ಕೆಪಾಸಿಟರ್‌, ವೋಲ್ಟೇಜ್‌ ರೆಗ್ಯುಲೇಟರ್‌, ಇಂಟಿಗ್ರೇಟೆಡ್‌ ಸರ್ಕ್ಯೂಟ್‌ ಮತ್ತು ಎಲ್‌ಇಡಿ ಬಳಸಿ ಈ ವಾಹನ ತಯಾ
ರಿಸಲಾಗಿದೆ’ ಎಂದು ವಿದ್ಯಾರ್ಥಿ ಬಿ.ಎಸ್‌ ಇಂದ್ರೇಶ್‌ ಕುಮಾರ್‌ ವಿವರಿಸಿದರು.

ADVERTISEMENT

‘ನಾವು ನಾಲ್ವರು ಸೇರಿ ಈ ಪ್ರಾಜೆಕ್ಟ್‌ ಆರಿಸಿಕೊಂಡೆವು. ಅಂಗವಿಕಲರ ಅವಶ್ಯಕತೆಯನ್ನು ಅರಿತು ಈ ವಾಹನ ತಯಾರಿಸಿದ್ದೇವೆ‘ ಎಂದು ವಿದ್ಯಾರ್ಥಿ ಆರ್‌.ಸುನೀಲ್‌ ತಿಳಿಸಿದರು.

‘ಟ್ರೈಸಿಕಲ್‌ ಮೇಲೆ 50 ವಾಟ್‌ ಸಾಮರ್ಥ್ಯದ ಎರಡು ಸೌರ ಫಲಕಗಳನ್ನು ಅಳವಡಿಸಲಾಗಿದೆ. ಅದನ್ನು ಮೋಟಾರ್‌ಗೆ ಜೋಡಿಸಲಾಗಿರುತ್ತದೆ. ಸೌರ ಶಕ್ತಿ ಲಭ್ಯವಿಲ್ಲದ ಸಂದರ್ಭದಲ್ಲಿ ವಿದ್ಯುತ್‌ ಮೂಲಕ ಬ್ಯಾಟರಿಚಾರ್ಚ್‌ ಮಾಡಿ ಈ ವಾಹನವನ್ನು ಚಲಾಯಿಸಬಹುದು’ ಎಂದು ವಿದ್ಯಾರ್ಥಿ ಸಂತೋಷ್‌ ಗೌಡ ಪಾಟೀಲ ತಿಳಿಸಿದರು.

‘ವಿದ್ಯುತ್‌ ಬಳಸಿ ವಾಹನದ ಬ್ಯಾಟರಿ ಚಾರ್ಜ್‌ ಮಾಡಲು 4 ರಿಂದ 5 ಗಂಟೆಗಳು ಬೇಕು. ಸೌರ ಶಕ್ತಿ ಬಳಸಿ ಚಾರ್ಜ್‌ ಮಾಡಲು 6 ರಿಂದ 8 ಗಂಟೆ ತಗಲುತ್ತದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 30 ಕಿ.ಮೀ ಪ್ರಯಾಣಿಸಬಹುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.