ADVERTISEMENT

ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ‘ಸೌರ ಶಕ್ತಿ’

ಆರೋಗ್ಯ ಕೇಂದ್ರಗಳ ವಿದ್ಯುತ್ ಬಿಲ್‌ಗಳಲ್ಲಿ ಶೇ 70 ರಷ್ಟು ಉಳಿತಾಯ | ಸಾವಿರಕ್ಕೂ ಅಧಿಕ ಆಸ್ಪತ್ರೆಗಳಿಗೆ ಸೌರ ವಿದ್ಯುತ್ ಘಟಕ ಅಳವಡಿಕೆ

ವರುಣ ಹೆಗಡೆ
Published 8 ಫೆಬ್ರುವರಿ 2025, 23:55 IST
Last Updated 8 ಫೆಬ್ರುವರಿ 2025, 23:55 IST
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡಕ್ಕೆ ಸೌರ ಫಲಕ ಅಳವಡಿಸಿರುವುದು
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡಕ್ಕೆ ಸೌರ ಫಲಕ ಅಳವಡಿಸಿರುವುದು   

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವಿದ್ಯುತ್ ಬಿಲ್‌ ಪಾವತಿ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆ, ಸೌರ ಶಕ್ತಿ ಬಳಕೆಗೆ ಆದ್ಯತೆ ನೀಡಿದೆ. ಈಗಾಗಲೇ 1,152 ಆರೋಗ್ಯ ಕೇಂದ್ರಗಳು ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಬಿಲ್‌ಗಳಲ್ಲಿ ಶೇಕಡ 70 ರಷ್ಟು ಉಳಿತಾಯ ಮಾಡುತ್ತಿವೆ. 

ಸೆಲ್ಕೊ ಫೌಂಡೇಷನ್ ಸಹಯೋಗದಲ್ಲಿ ಆರೋಗ್ಯ ಇಲಾಖೆಯು 2024ರ ನವೆಂಬರ್‌ನಲ್ಲಿ ‘ಸೌರ ಸ್ವಾಸ್ಥ್ಯ’ ಯೋಜನೆಯನ್ನು ಪ್ರಾರಂಭಿಸಿದೆ. ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಫೌಂಡೇಷನ್‌ ಸೌರ ವಿದ್ಯುತ್ ಘಟಕಗಳ ಅಳವಡಿಕೆಗೆ ಆರ್ಥಿಕ ನೆರವು ಒದಗಿಸುತ್ತಿದೆ. ಈಗಾಗಲೇ ರಾಯಚೂರು ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳು ಸೇರಿ ರಾಜ್ಯದ ಸಾವಿರಕ್ಕೂ ಅಧಿಕ ಆಸ್ಪತ್ರೆಗಳಿಗೆ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕಗಳನ್ನು ಅಳವಡಿಸಲಾಗಿದೆ. ಬ್ಯಾಟರಿ ಆಧಾರಿತ ಈ ವ್ಯವಸ್ಥೆಯಿಂದ ದಿನದ 24 ಗಂಟೆಯೂ ಆಸ್ಪತ್ರೆಗಳಿಗೆ ಸೌರ ವಿದ್ಯುತ್ ದೊರೆಯುತ್ತಿದೆ.

ಫೌಂಡೇಷನ್ ಜತೆಗೆ ಇಲಾಖೆ ಮಾಡಿಕೊಂಡಿರುವ ಒಪ್ಪಂದದ ಅನುಸಾರ, 2026ರ ವೇಳೆಗೆ 3,381 ಉಪ ಕೇಂದ್ರಗಳು, 1,500 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ 5,000 ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸುವ ಗುರಿ ಇದೆ. ಇದಕ್ಕೆ ₹120 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಯೋಜನೆಯಡಿ 119 ತಾಲ್ಲೂಕು ಆಸ್ಪತ್ರೆಗಳಿಗೂ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲಾಗುತ್ತದೆ. 

ADVERTISEMENT

₹ 100 ಕೋಟಿ ಉಳಿತಾಯ:

ಉಪ ಕೇಂದ್ರಗಳ ಸೌರ ಫಲಕಗಳು 250 ವಾಟ್‌ನಿಂದ 500 ವಾಟ್ ಸಾಮರ್ಥ್ಯ ಹೊಂದಿದ್ದರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸೌರ ಫಲಕಗಳು 4 ಕಿಲೋವಾಟ್‌ನಿಂದ 5 ಕಿಲೋವಾಟ್‌ ಸಾಮರ್ಥ್ಯ ಹೊಂದಿರಲಿವೆ. ತಾಲ್ಲೂಕು ಆಸ್ಪತ್ರೆಗಳಿಗೆ 10 ಕಿಲೋವಾಟ್‌ ಸಾಮರ್ಥ್ಯದ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ. ಇದರಿಂದಾಗಿ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. 5,000 ಆರೋಗ್ಯ ಕೇಂದ್ರಗಳಿಗೆ ಸೌರ ಘಟಕಗಳನ್ನು ಅಳವಡಿಸಿದ ಬಳಿಕ, ಮುಂದಿನ 10 ವರ್ಷಗಳಲ್ಲಿ ₹100 ಕೋಟಿಯಷ್ಟು ಸರ್ಕಾರದ ಬೊಕ್ಕಸಕ್ಕೆ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಈಗಾಗಲೇ ಪ್ರಥಮ ಹಂತದಲ್ಲಿ ಸಾವಿರಕ್ಕೂ ಅಧಿಕ ಆರೋಗ್ಯ ಕೇಂದ್ರಗಳಿಗೆ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಲಾಗಿದೆ. ಐದು ಸಾವಿರ ಆರೋಗ್ಯ ಕೇಂದ್ರಗಳಿಗೆ ಈ ಘಟಕ ಅಳವಡಿಸುವ ಗುರಿ ಹೊಂದಲಾಗಿದೆ.
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

‘ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಸೌರ ವಿದ್ಯುತ್ ಸಹಕಾರಿಯಾಗಲಿದೆ. ನವೀಕರಿಸಬಹುದಾದ ಶಕ್ತಿ ಬಳಕೆಗೆ ಉತ್ತೇಜನ ನೀಡುವುದರಿಂದ ಪರಿಸರ ಸಂರಕ್ಷಣೆಯೂ ಸಾಧ್ಯವಾಗಲಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಸೌರ ವಿದ್ಯುತ್ ಘಟಕಗಳ ಅಳವಡಿಕೆಯಿಂದ ವಿದ್ಯುತ್ ಬಳಕೆಯ ವೆಚ್ಚ ಇಳಿಕೆಯಾಗಲಿದೆ. ದುಬಾರಿ ಬೆಲೆಯ ಡಿಸೇಲ್ ಜನರೇಟರ್‌ಗಳಿಂದಲೂ ಮುಕ್ತವಾಗಲಿವೆ’ ಎಂದು ಸೆಲ್ಕೊ ಫೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್‌ ಹಂದೆ ತಿಳಿಸಿದರು.

ರಿಮೋಟ್ ಆಧಾರಿತ ನಿಗಾ ವ್ಯವಸ್ಥೆ

ಸೌರ ಸ್ವಾಸ್ಥ್ಯ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೆ ಅಳವಡಿಸಿರುವ ಸೌರ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ‘ರಿಮೋಟ್ ಮಾನಿಟರಿಂಗ್ ಸಿಸ್ಟಮ್’ ಮೂಲಕ ನಿರಂತರ ನಿಗಾ ಇಡಲಾಗುತ್ತದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿನ ಸೌರ ವಿದ್ಯುತ್ ಘಟಕಗಳಲ್ಲಿ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ನಿವಾರಣೆ ಸಾಧ್ಯವಾಗಲಿದೆ. ‘ಸೌರ ಇ-ಮಿತ್ರಾ’ ಮೊಬೈಲ್ ಆ್ಯಪ್ ಮೂಲಕವೂ ಸೋಲಾರ್ ಸಾಧನಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಫಲಕಕ್ಕೆ ಹಾನಿ ಸೇರಿ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಾಗ ಈ ಆ್ಯಪ್ ಮೂಲಕವೇ ವೈದ್ಯಕೀಯ ಸಿಬ್ಬಂದಿ ದೂರು ನೀಡಬಹುದಾಗಿದೆ. ಕೇಂದ್ರೀಕೃತ ವ್ಯವಸ್ಥೆಯಡಿ ಸೇವಾದಾರರು ಈ ದೂರನ್ನು ಪರಿಶೀಲಿಸಿ ಸ್ಥಳೀಯ ನಿರ್ವಾಹಕರಿಗೆ ಸಮಸ್ಯೆ ಪರಿಹರಿಸಲು ಸೂಚಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.