
ಬೆಂಗಳೂರು: ‘ಪಿಎಂ–ಕುಸುಮ್ ಬಿ‘ ಯೋಜನೆಯಡಿ ಸೌರ ಪಂಪ್‌ಸೆಟ್ ಪಡೆಯಲು ರಾಜ್ಯದಾದ್ಯಂತ 18 ಸಾವಿರ ರೈತರು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದಾರೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್ (ಕುಸುಮ್) ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಕುಸುಮ್ –ಬಿ ಯೋಜನೆಯಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆಗೆ ರಾಜ್ಯ ಸರ್ಕಾರ ನೀಡುವ ಸಬ್ಸಿಡಿ ಪಾಲನ್ನು ಶೇ 30ರಿಂದ 50ಕ್ಕೆ ಹೆಚ್ಚಿಸಲಾಗಿದೆ‘ ಎಂದು ಮಾಹಿತಿ ನೀಡಿದರು.
‘ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಸಾಧಿಸಲು ಕುಸುಮ್ ಯೋಜನೆ ರೂಪಿಸಲಾಗಿದೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ, ಯೋಜನೆ ಅನುಷ್ಠಾನ ಮಾಡುತ್ತಿದೆ. ರಾಜ್ಯದ ಎಲ್ಲ ಎಸ್ಕಾಂಗಳು ಪೂರಕವಾಗಿ ಕೆಲಸ ಮಾಡುತ್ತಿವೆ‘ ಎಂದು ವಿವರಿಸಿದರು.
‘ಕುಸುಮ್ ಬಿ ಯೋಜನೆಯಡಿ ರೈತರಿಗೆ ಸೌರ ಫಲಕಗಳು, ಸಬ್‌ಮರ್ಸಿಬಲ್/ಸರ್ಫೇಸ್ ಡಿಸಿ ಪಂಪ್‌ಗಳು, ಮೌಂಟಿಂಗ್ ಸ್ಟ್ರಕ್ಚರ್, ಪ್ಯಾನಲ್ ಬೋರ್ಡ್, ಪೈಪ್ ಮತ್ತು ಕೇಬಲ್ ಪೂರೈಸಲಾಗುತ್ತದೆ‘ ಎಂದು ತಿಳಿಸಿದರು.
ಎಂಎನ್‌ಆರ್‌ಇ ಜಂಟಿ ಕಾರ್ಯದರ್ಶಿ ದಿನೇಶ್ ಜಗದಾಳೆ ‘ರಾಜಸ್ಥಾನ, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಕುಸುಮ್ ಯೋಜನೆ ಯಶಸ್ವಿಯಾಗಿದೆ. ನಾವು ಇನ್ನಷ್ಟು ಸಾಧನೆ ಮಾಡುವ ಅವಕಾಶವಿದೆ‘ ಎಂದರು.
‘ಈ ಯೋಜನೆ ಅನುಷ್ಠಾನದ ಹಂತದಲ್ಲಿ ಏನೇನು ಸಮಸ್ಯೆಗಳಿವೆ ಎಂದು ಗೊತ್ತಾದರೆ, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಜನೆಯಲ್ಲಿ ಬದಲಾವಣೆ ತರಲು ಸಿದ್ಧರಿದ್ದೇವೆ‘ ಎಂದರು.
'ಕುಸುಮ್ ಯೋಜನೆ' ಅನುಷ್ಠಾನಗೊಳಿಸಿರುವ ದೇಶದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ತಮ್ಮ ಅನುಭವ ಹಂಚಿಕೊಂಡರು.
ಐಆರ್‌ಇಡಿಎ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕುಮಾರ್ ದಾಸ್, ಎಂಎನ್‌ಆರ್‌ಇ ಜಂಟಿ ಕಾರ್ಯದರ್ಶಿ ದಿನೇಶ್ ಜಗದಾಳೆ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ರೋಶನ್, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.