ADVERTISEMENT

ಹಾಪ್‌ಕಾಮ್ಸ್‌ಗೆ ಸೋಲಾರ್ ವಾಹನಗಳ ಹಸ್ತಾಂತರ

ಐಐಎಚ್‌ಆರ್ ಅಭಿವೃದ್ಧಿಪಡಿಸಿರುವ ವಾಹನ

​ಪ್ರಜಾವಾಣಿ ವಾರ್ತೆ
Published 11 ಮೇ 2021, 19:31 IST
Last Updated 11 ಮೇ 2021, 19:31 IST
ಹಾಪ್‌ಕಾಮ್ಸ್‌ ಕೇಂದ್ರ ಕಚೇರಿಯಲ್ಲಿ ಸೋಲಾರ್ ವಾಹನಗಳಿಗೆ ಸಚಿವ ಆರ್.ಶಂಕರ್ ಚಾಲನೆ ನೀಡಿದರು. ಹಾಪ್‌ಕಾಮ್ಸ್‌ ಪದಾಧಿಕಾರಿಗಳು ಇದ್ದರು.
ಹಾಪ್‌ಕಾಮ್ಸ್‌ ಕೇಂದ್ರ ಕಚೇರಿಯಲ್ಲಿ ಸೋಲಾರ್ ವಾಹನಗಳಿಗೆ ಸಚಿವ ಆರ್.ಶಂಕರ್ ಚಾಲನೆ ನೀಡಿದರು. ಹಾಪ್‌ಕಾಮ್ಸ್‌ ಪದಾಧಿಕಾರಿಗಳು ಇದ್ದರು.   

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಹಣ್ಣು–ತರಕಾರಿ ಹಾಗೂ ಇತರೆ ಉತ್ಪನ್ನಗಳನ್ನು ತಾಜಾ ಸ್ಥಿತಿಯಲ್ಲೇಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ (ಐಐಎಚ್‌ಆರ್) ಅಭಿವೃದ್ಧಿಪಡಿಸಿರುವ ನಾಲ್ಕು ಸೋಲಾರ್‌ ವಾಹನಗಳನ್ನು ಹಾಪ್‌ಕಾಮ್ಸ್‌ಗೆ ಮಂಗಳವಾರ ಹಸ್ತಾಂತರಿಸಲಾಯಿತು.

ಈ ವಾಹನದಲ್ಲಿ ವಿದ್ಯುತ್ ಅಥವಾ ಸೌರಶಕ್ತಿ ಬಳಸಿ ಹಣ್ಣು-ತರಕಾರಿಗಳನ್ನು ತಾಜಾಸ್ಥಿತಿಯಲ್ಲೇ ಇಡಬಹುದು.ಎಲ್ಲ ಬಗೆಯ ಹವಾಮಾನ ಸ್ಥಿತಿಗಳಲ್ಲೂ ಒಂದೇ ರೀತಿಯ ತಾಜಾತನ ಇರಲಿದೆ.ವಾಹನದ ಮೇಲ್ಭಾಗದಲ್ಲಿ ಇರುವ ಸೌರಫಲಕದಿಂದ ಉಷ್ಣಾಂಶ ನಿಯಂತ್ರಿಸುವ ವ್ಯವಸ್ಥೆಯೂ ಇದೆ.

ಬೆಂಗಳೂರು, ಕಲಬುರ್ಗಿ, ಬೆಳಗಾವಿ ಹಾಗೂ ಮಂಡ್ಯದ ಹಾಪ್‌ಕಾಮ್ಸ್‌ಗಳಿಗೆ ತಲಾ ಒಂದು ವಾಹನ ನೀಡಲಾಗಿದ್ದು, ಈಗ ಲಾಕ್‌ಡೌನ್ ಇರುವುದರಿಂದ ನಾಲ್ಕೂ ವಾಹನಗಳನ್ನು ತಾತ್ಕಾಲಿಕವಾಗಿ ಬೆಂಗಳೂರಿನ ನಾಗರಿಕರಿಗೆ ಉತ್ಪನ್ನಗಳನ್ನು ಪೂರೈಸಲು ಹಾಪ್‌ಕಾಮ್ಸ್‌ ನಿರ್ಧರಿಸಿದೆ. ಕಳೆದ ಲಾಕ್‌ಡೌನ್‌ ವೇಳೆಯೂ ಐಐಎಚ್‌ಆರ್‌ ಈ ವಾಹನಗಳನ್ನು ಬಳಕೆಗೆ ನೀಡಿತ್ತು.

ADVERTISEMENT

ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ತೋಟಗಾರಿಕೆ ಸಚಿವ ಆರ್.ಶಂಕರ್,‘ಲಾಕ್‌ಡೌನ್ ಸಮಯದಲ್ಲಿ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಸರಬರಾಜು ಹಾಗೂ ಮಾರಾಟಕ್ಕೆ ಯಾವುದೇ ಅಡೆತಡೆಗಳಿಲ್ಲ. ಈ ಅವಧಿಯಲ್ಲಿ ವಾಹನಗಳಲ್ಲಿ ಗ್ರಾಹಕರಿಗೆ ಉತ್ಪನ್ನ ತಲುಪಿಸುವುದು ಸೂಕ್ತ. ವಿಶೇಷ ತಂತ್ರಜ್ಞಾನವುಳ್ಳ ಈ ವಾಹನಗಳ ಕುರಿತು ಜನರ ಪ್ರತಿಕ್ರಿಯೆ ತಿಳಿದು, ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.

‘ಈಗಿನ ಪರಿಸ್ಥಿತಿಯಲ್ಲಿ ಗ್ರಾಹಕರು ಮನೆಯಿಂದ ಹೊರಬರಲು ಹೆದರುತ್ತಾರೆ. ಹಾಗಾಗಿ, ಅವರ ಮನೆಬಾಗಿಲಿಗೆ ಈ ವಾಹನಗಳಲ್ಲಿ ಹಣ್ಣು–ತರಕಾರಿಯನ್ನು ತಾಜಾ ಸ್ಥಿತಿಯಲ್ಲಿ ಪೂರೈಸಲಾಗುವುದು. ವಾಹನದಲ್ಲಿ ತೂಕದ ಯಂತ್ರ, ಸ್ವಯಂಚಾಲಿತ ಘೋಷಣಾ ಧ್ವನಿವರ್ಧಕಗಳೂ ಇವೆ’ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಎಸ್.ಮಿರ್ಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.