ADVERTISEMENT

ದೈಹಿಕವಾಗಿ ಸದೃಢರನ್ನಾಗಿ ಮಾಡುವ ಶಕ್ತಿ ಕ್ರೀಡೆಗಿದೆ: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 19:54 IST
Last Updated 16 ನವೆಂಬರ್ 2025, 19:54 IST
   

ಯಲಹಂಕ: ‘ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಒಂದುಗೂಡಿಸಿ, ದೈಹಿಕವಾಗಿ ಸದೃಢರನ್ನಾಗಿ ಮಾಡುವ ಶಕ್ತಿ ಕ್ರೀಡೆಗೆ ಇದೆ. ಅದಕ್ಕಾಗಿಯೇ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿವರ್ಷ ಅಂತರ ಅಪಾರ್ಟ್‌ಮೆಂಟ್‌ ಕ್ರೀಡಾ ಉತ್ಸವ ಆಯೋಜಿಸಲಾಗುತ್ತಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಕಾಂಗ್ರೆಸ್ ತಂಡ, ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಬಿಜಿ ಸ್ವಯಂ ಸೇವಕರ ಸಂಘದ ಆಶ್ರಯದಲ್ಲಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಆಯೋಜಿಸಿದ್ದ ಮೂರನೇ ವರ್ಷದ ‘ಇಂಟರ್ ಅಪಾರ್ಟ್‌ಮೆಂಟ್‌ ಸ್ಪೋರ್ಟ್ಸ್ ಫೆಸ್ಟ್-2025’ರ ಸಮಾ ರೋಪ ಸಮಾರಂಭದಲ್ಲಿ ವಿಜೇತ ಕ್ರೀಡಾಪಟುಗಳು ಹಾಗೂ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

‘ಬೆಂಗಳೂರಿನ ಮಟ್ಟಿಗೆ ಸ್ಥಳೀಯರ ಸಂಖ್ಯೆಗಿಂತ ವೃತ್ತಿ ಕಾರಣಕ್ಕಾಗಿ ಹೊರ ಜಿಲ್ಲೆ-ರಾಜ್ಯಗಳಿಂದ ಇಲ್ಲಿಗೆ ಆಗಮಿಸಿ ನೆಲಸಿದವರೇ ಹೆಚ್ಚು. ಒಂದೇ ಅಪಾರ್ಟ್‌ ಮೆಂಟ್‌ನಲ್ಲಿದ್ದರೂ ಒಬ್ಬರಿಗೊಬ್ಬರು ಪರಿಚಯವಿಲ್ಲದ ಸ್ಥಿತಿ ಇದೆ. ಸಮಾಜದ ಪ್ರತಿಯೊಬ್ಬರನ್ನೂ ಬೆಸೆಯುವ ಶಕ್ತಿ ಇರು ವುದು ಕ್ರೀಡೆಗೆ ಮಾತ್ರ. ಕಳೆದ ಮೂರು ವರ್ಷದಲ್ಲಿ ನಮ್ಮ ಕ್ರೀಡಾ ಉತ್ಸವದಲ್ಲಿ ಪಾಲ್ಗೊಂಡ ಹಲವರು ಈ ಉತ್ಸವದ ಕಾರಣಕ್ಕೆ ತಮಗೆ ಹೊಸ ಗೆಳೆಯರು-ಗೆಳತಿಯರ ಪರಿಚಯವಾಗಿದೆ ಎಂದಿದ್ದಾರೆ. ಸಮಾಜದಲ್ಲಿ ಹೀಗೆ ಅಪರಿಚಿತರೆಲ್ಲರೂ ಪರಸ್ಪರ ಹತ್ತಿರವಾದಾಗ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇದ್ದಾಗ ಮಾತ್ರ ಶಕ್ತಿಯುತ ಹಾಗೂ ಸದೃಢ ಸಮಾಜದ ನಿರ್ಮಾಣ ಸಾಧ್ಯ’ ಎಂದರು. 

ADVERTISEMENT

ಸಂಘಟಕಿ ಮೀನಾಕ್ಷಿ ಶೇಷಾದ್ರಿ ಮಾತನಾಡಿ, ‘ಅಪಾರ್ಟ್‌ಮೆಂಟ್‌ ನಿವಾಸಿಗಳಿಗಾಗಿ ಇಂತಹ ವಿನೂತನ ಕ್ರೀಡಾಕೂಟ ಏರ್ಪಡಿಸಿರುವುದು ಬೆಂಗಳೂರಿನಲ್ಲಿಯೇ ಪ್ರಪ್ರಥಮವಾಗಿದೆ. ಇದರಲ್ಲಿ 6 ವರ್ಷದಿಂದ 80 ವರ್ಷದವರೆಗಿನ ವಿವಿಧ ವಯೋಮಾನದವರಿಗಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು’ ಎಂದರು. 

ಶೋಭಾ ಸಿಟಿ ಅಪಾರ್ಟ್‌ಮೆಂಟ್‌ ತಂಡಕ್ಕೆ ಸಮಗ್ರ ತಂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೋದ್ರೇಜ್ ವುಡ್‌ಮೆನ್ಸ್ ಅಪಾರ್ಟ್‌ಮೆಂಟ್‌ನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ವಜ್ರಂ ಅಪಾರ್ಟ್‌ಮೆಂಟ್‌ನ ಇಬ್ಬರು ಅದೃಷ್ಟಶಾಲಿ ವಿಜೇತರು ಥಾಯ್ಲೆಂಡ್‌ ಪ್ರವಾಸಕ್ಕೆ ಆಯ್ಕೆಯಾದರು. 80 ವರ್ಷದ ವೃದ್ಧೆಯೊಬ್ಬರು ಕೇರಂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.