ADVERTISEMENT

ಉತ್ತರ–ದಕ್ಷಿಣ ಭಾರತಗಳನ್ನು ಬೆಸೆಯುವ ಕೊಂಡಿ ಶ್ರವಣಬೆಳಗೊಳ: ಸುರೇಂದ್ರ ಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 16:06 IST
Last Updated 7 ಜನವರಿ 2024, 16:06 IST
ಶ್ರವಣಬೆಳಗೊಳ ಮಠದ ಪೀಠಾಧೀಶ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಳ ಪುರಪ್ರವೇಶದ ಪ್ರಯುಕ್ತ ಜೈನ ಭವನದಲ್ಲಿ ಭಾನುವಾರ ಕಲ್ಪಧ್ರುಮ ಅಭಿಷೇಕಕ್ಕೆ ಚಾಲನೆ ನೀಡಿದರು. ಭಾರತೀಯ ಜೈನ್‌ ಮಿಲನ್‌ ಕಾರ್ಯಾಧ್ಯಕ್ಷ ಡಿ. ಸುರೇಂದ್ರಕುಮಾರ್ ಉಪಸ್ಥಿತರಿದ್ದರು. – ಪ್ರಜಾವಾಣಿ ಚಿತ್ರ
ಶ್ರವಣಬೆಳಗೊಳ ಮಠದ ಪೀಠಾಧೀಶ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಳ ಪುರಪ್ರವೇಶದ ಪ್ರಯುಕ್ತ ಜೈನ ಭವನದಲ್ಲಿ ಭಾನುವಾರ ಕಲ್ಪಧ್ರುಮ ಅಭಿಷೇಕಕ್ಕೆ ಚಾಲನೆ ನೀಡಿದರು. ಭಾರತೀಯ ಜೈನ್‌ ಮಿಲನ್‌ ಕಾರ್ಯಾಧ್ಯಕ್ಷ ಡಿ. ಸುರೇಂದ್ರಕುಮಾರ್ ಉಪಸ್ಥಿತರಿದ್ದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಬೆಸೆಯುವ ಕೊಂಡಿ ಶ್ರವಣಬೆಳಗೊಳ ಎಂದು ಭಾರತೀಯ ಜೈನ್‌ ಮಿಲನ್‌ ಕಾರ್ಯಾಧ್ಯಕ್ಷ ಡಿ. ಸುರೇಂದ್ರ ಕುಮಾರ್‌ ಹೇಳಿದರು.

ಶ್ರವಣಬೆಳಗೊಳ ಮಠದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಬೆಂಗಳೂರು ಪುರ ಪ್ರವೇಶದ ಸಭಾಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರವಣಬೆಳಗೊಳದಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಉತ್ತರ ಭಾರತದಿಂದ ಜೈನ ಸಮುದಾಯದವರು ಬರುತ್ತಾರೆ. ದಕ್ಷಿಣ ಭಾರತದವರೊಂದಿಗೆ ಸೇರಿ ಅಭಿಷೇಕ ನೆರವೇರಿಸುತ್ತಾರೆ. ಅದೇ ರೀತಿ ರಾಜ್ಯದ ಜೈನ ಸಮುದಾಯಕ್ಕೆ ಧರ್ಮಸ್ಥಳ ಮತ್ತು ಶ್ರವಣಬೆಳಗೊಳ ಎರಡು ಕಣ್ಣುಗಳಂತೆ ಎಂದು ಬಣ್ಣಿಸಿದರು.

ADVERTISEMENT

ಮೈಸೂರು ಮಹಾರಾಜರು ರಾಜ್ಯವನ್ನು ಒಕ್ಕೂಟ ವ್ಯವಸ್ಥೆಗೆ ಬಿಟ್ಟುಕೊಡುವಾಗ ಹಲವು ಷರತ್ತುಗಳನ್ನು ಹಾಕಿದ್ದರು. ಅದರಲ್ಲಿ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಸುತ್ತಿದ್ದ ಮಹಾಮಸ್ತಕಾಭಿಷೇಕವನ್ನು ಸರ್ಕಾರ ಮುಂದುವರಿಸಬೇಕು ಎಂಬುದೂ ಸೇರಿತ್ತು. ಈ ವಿಚಾರವನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಂದು ಬಾರಿ ತಿಳಿಸಿದ್ದರು ಮತ್ತು ಅದರಂತೆ ಸರ್ಕಾರ ನಡೆದುಕೊಂಡಿದೆ ಎಂದು ನೆನಪಿಸಿದರು.

ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಪುರಭವನ ವೃತ್ತದಿಂದ ಜೈನ ಭವನದವರೆಗೆ ಆಕರ್ಷಕ ಮೆರವಣಿಗೆ ಮಾಡಲಾಯಿತು. 24 ತೀರ್ಥಂಕರರಿಗೆ ಏಕಕಾಲದಲ್ಲಿ ಕಲ್ಪಧ್ರುಮ ಮಹಾಭಿಷೇಕ ಪೂಜೆ ನೆರವೇರಿಸಲಾಯಿತು. ಸ್ವಾಮೀಜಿಯವರಿಗೆ ಭಕ್ತಿಯ ಗುರುವಂದನೆ ನೆರವೇರಿಸಲಾಯಿತು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್‌, ಶಾಸಕ ಉದಯ ಗರುಡಾಚಾರ್‌, ಅಲ್ಪಸಂಖ್ಯಾತ ಇಲಾಖೆಯ ಕಾರ್ಯದರ್ಶಿ ಮನೋಜ್‌ ಜೈನ್, ಕರ್ನಾಟಕ ಜೈನ ಅಸೋಸಿಯೇಶನ್‌ ಅಧ್ಯಕ್ಷ ಬಿ. ಪ್ರಸನ್ನಯ್ಯ, ಉಪಾಧ್ಯಕ್ಷ ಎ.ಸಿ. ಪಾಟೀಲ್‌, ಕಾರ್ಯದರ್ಶಿ ರಾಜಕೀರ್ತಿ, ನಿಕಟಪೂರ್ವ ಅಧ್ಯಕ್ಷ ಎಸ್‌. ಜಿತೇಂದ್ರ ಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.