ADVERTISEMENT

33 ಸಾವಿರ ಠೇವಣಿದಾರರಿಗೆ ₹753.61 ಕೋಟಿ ವಾಪಸ್- ಡಿಐಸಿಜಿಸಿ ಅಡಿ ಹಣ ಬಿಡುಗಡೆ

ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 6:01 IST
Last Updated 13 ಡಿಸೆಂಬರ್ 2021, 6:01 IST
ನಗರದಲ್ಲಿ ಭಾನುವಾರ ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್‌ ಠೇವಣಿದಾರರಿಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಚೆಕ್ ವಿತರಿಸಿದರು. ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್, ಜಿಲ್ಲಾಧಿಕಾರಿ ಜೆ. ಮಂಜುನಾಥ್  ಇದ್ದರು – ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್‌ ಠೇವಣಿದಾರರಿಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಚೆಕ್ ವಿತರಿಸಿದರು. ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್, ಜಿಲ್ಲಾಧಿಕಾರಿ ಜೆ. ಮಂಜುನಾಥ್  ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ’ನಗರದ ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್‌ನ ಸುಮಾರು 33 ಸಾವಿರ ಠೇವಣಿ
ದಾರರ ಕ್ಲೇಮುಗಳಿಗೆ ಠೇವಣಿ ವಿಮಾ ರಕ್ಷಣೆ ಕಾಯ್ದೆ (ಡಿಐಸಿಜಿಸಿ) ಅಡಿ ಒಟ್ಟು ₹753.61 ಕೋಟಿ ಮೊತ್ತವನ್ನು ಮರು ಜಮಾ ಮಾಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

‘ಠೇವಣಿದಾರರು ಮೊದಲು: ಕಾಲಮಿತಿಯಲ್ಲಿ ₹5 ಲಕ್ಷವರೆಗೆ ಠೇವಣಿ ವಿಮೆ ಪಾವತಿ’ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ವೆಬ್‌ಕಾಸ್ಟ್‌ ಮೂಲಕ ನಡೆದ ಕಾರ್ಯಕ್ರಮದ ಬಳಿಕ ಈ ವಿಷಯ ತಿಳಿಸಿದರು.

‘ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ₹1ರಿಂದ ₹5 ಲಕ್ಷದವರೆಗಿನ ಮೊತ್ತದ ಠೇವಣಿ ಇರಿಸಿದವರಲ್ಲಿ ಶೇ 98.1ರಷ್ಟು ಮಂದಿ ಸಣ್ಣ ಮತ್ತು ಮಧ್ಯಮ ವರ್ಗದವರಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್ ಜತೆಗೆ ಬಾಗಲಕೋಟೆಯ ಮುಧೋಳ ಕೋ- ಆಪರೇ
ಟಿವ್ ಬ್ಯಾಂಕ್, ವಿಜಯಪುರದ ಡೆಕ್ಕನ್ ಅರ್ಬನ್ ಕೋ- ಆಪರೇಟೀವ್ ಬ್ಯಾಂಕ್, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಮಿಲ್ಲಾತ್ ಕೋ- ಆಪರೇಟಿವ್ ಬ್ಯಾಂಕ್‌ಗಳ ಒಟ್ಟು 77,819 ಠೇವಣಿದಾರರ ಕ್ಲೇಮುಗಳಿಗೆ ಹಣ ಶೀಘ್ರವೇ ಮರುಪಾವತಿ ಆಗಲಿದೆ’ ಎಂದು ಭರವಸೆ ನೀಡಿದರು.

‘ನಗರದ ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್ ಮತ್ತು ಕರ್ನಾಟಕದ ಐದು ಕೇಂದ್ರಗಳಲ್ಲಿರುವ ಇತರ ನಾಲ್ಕು ಅರ್ಬನ್‌ ಕೋ–ಆಪರೇಟಿವ್‌ಗಳು ವಿವಿಧ ಕಾರಣಗಳಿಗೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ನಂತರ ಕೇಂದ್ರ ಸರ್ಕಾರವು ಅವುಗಳ ಗ್ರಾಹಕರಿಗೆ ಗರಿಷ್ಠ ₹5 ಲಕ್ಷವರೆಗೆ ಡಿಐಸಿಜಿಸಿ ಕ್ಲೈಮ್ ಮೊತ್ತವನ್ನು ಬಿಡುಗಡೆ ಮಾಡಿದೆ. ಮಧ್ಯಂತರ ಹಣ ಪಾವತಿಯ ಮೊದಲ ಕಂತನ್ನು ನ.29ರಂದು ಬಿಡುಗಡೆ ಮಾಡಲಾಗಿದೆ’ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್‌ನ ಕೆಲವು ಠೇವಣಿದಾರರಿಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಚೆಕ್ ವಿತರಿಸಿದರು.

ಸಂಸದ ಪಿ. ಸಿ ಮೋಹನ್, ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಮತ್ತಿಬ್ಬರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.