ADVERTISEMENT

ಹಣ ಪಡೆಯಲು ಸೇರಿದ್ದ ಗ್ರಾಹಕರು

ಶ್ರೀ ಗುರುರಾಘವೇಂದ್ರ ಬ್ಯಾಂಕ್ ಬಳಿ ಗೊಂದಲಮಯ ವಾತಾವರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 20:17 IST
Last Updated 20 ಜೂನ್ 2020, 20:17 IST

ಬೆಂಗಳೂರು: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಪರಿಷ್ಕೃತ ಮಾರ್ಗಸೂಚಿಯಂತೆ ಗ್ರಾಹಕರಿಗೆ ತಲಾ ₹ 1 ಲಕ್ಷ ವಿತರಿಸಲಾಗುತ್ತದೆ ಎಂಬ ಸುದ್ದಿ ತಿಳಿದು ನೂರಾರು ಗ್ರಾಹಕರು ಶನಿವಾರ ಬೆಳಿಗ್ಗೆ ಬಸವನಗುಡಿ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಮುಂದೆ ಜಮಾಯಿಸಿದ್ದರಿಂದ ಕೆಲ ಕಾಲ ಗೊಂದಲಮಯ ವಾತಾವರಣ ಉಂಟಾಯಿತು.

ಈ ಮುನ್ನ ಗ್ರಾಹಕರು ತಮ್ಮ ಖಾತೆಯಿಂದ ₹ 35 ಸಾವಿರದವರೆಗೆ ಹಣ ಹಿಂಪಡೆಯಲು ಆರ್‌ಬಿಐ ಅವಕಾಶ ಮಾಡಿಕೊಟ್ಟಿತ್ತು. ಆನಂತರ ಬ್ಯಾಂಕಿನ ಹಣಕಾಸು ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ₹ 1 ಲಕ್ಷ ದವರೆಗೆ ಡ್ರಾ ಮಾಡಬಹುದೆಂದು ಶುಕ್ರವಾರ ನಿರ್ದೇಶನ ನೀಡಿತ್ತು. ಇದರಿಂದಾಗಿ ನೂರಾರು ಗ್ರಾಹಕರು ಹಣ ಪಡೆಯಲು ಬ್ಯಾಂಕಿನ ಕಚೇರಿಗೆ ಧಾವಿಸಿದ್ದರು.

‘ಈ ಮಧ್ಯೆ, ಕೆಲವು ಹಿರಿಯ ನಾಗರಿಕರಿಗೆ ವೈದ್ಯಕೀಯ ವೆಚ್ಚಗಳಿಗಾಗಿ ಬ್ಯಾಂಕ್‌ ₹ 50 ಸಾವಿರ ವಿತರಿಸಿತ್ತು. ರಿಸರ್ವ್‌ ಬ್ಯಾಂಕ್‌ ನಿರ್ದೇಶನದಲ್ಲಿ ಮೊದಲಿನ ₹ 35 ಸಾವಿರ ಸೇರಿ ₹ 1ಲಕ್ಷ ಡ್ರಾ ಮಾಡಬಹುದು ಎಂದು ಹೇಳಲಾಗಿದೆ. ಬ್ಯಾಂಕ್‌ ಸಿಬ್ಬಂದಿ ಈ ಹಿಂದೆ ₹ 50 ಸಾವಿರ ಹಾಗೂ ₹ 35 ಸಾವಿರ ಹಿಂಪಡೆದ ಗ್ರಾಹಕರಿಗೆ ಮಿಕ್ಕ ₹ 15ಸಾವಿರ ಮಾತ್ರ ಡ್ರಾ ಮಾಡಲು ಅವಕಾಶ ನೀಡಿದರು. ಇದು ಗೊಂದಲಕ್ಕೆ ಕಾರಣವಾಯಿತು’ ಎಂದು ಸ್ಥಳದಲ್ಲಿದ್ದ ಎಸ್‌ಬಿಎಂ ನಿವೃತ್ತ ನೌಕರ ಕೆ. ಮುರಳೀಧರ ತಿಳಿಸಿದರು.

ADVERTISEMENT

ಗೊಂದಲ ಪರಿಹಾರವಾದ ಬಳಿಕ ನಾಲ್ಕು ಕೌಂಟರ್‌ಗಳನ್ನು ವ್ಯವಸ್ಥೆ ಮಾಡಿ ತ್ವರಿತಗತಿಯಲ್ಲಿ ಹಣ ವಿತರಣೆಗೆ ವ್ಯವಸ್ಥೆ ಮಾಡಲಾಯಿತು.

ಸದ್ಯ ₹ 1 ಲಕ್ಷದವರೆಗೆ ಹಣ ಹಿಂಪಡೆಯಲು ಅವಕಾಶ ನೀಡಿರುವುದರಿಂದ ಶೇ 54ರಷ್ಟು ಗ್ರಾಹಕರು ತಮ್ಮ ಖಾತೆಯಿಂದ ಪೂರ್ಣ ಹಣ ತೆಗೆಯಲು ಸಾಧ್ಯವಾಗಲಿದೆ. ಉಳಿದಂತೆ ಎಲ್ಲ ಷರತ್ತುಗಳು ಮುಂದುವರಿಯಲಿವೆ ಎಂದು ರಿಸರ್ವ್‌ ಬ್ಯಾಂಕ್ ಹೇಳಿದೆ.

ಸಾವಿರಾರು ಗ್ರಾಹಕರು ಒಟ್ಟು ₹ 2000 ಕೋಟಿಗೂ ಅಧಿಕ ಹಣವನ್ನು ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ₹ 1400 ಕೋಟಿ ಅವ್ಯವಹಾರ ನಡೆಸಿದ ಆರೋಪವು ವಜಾಗೊಂಡಿರುವ ಬ್ಯಾಂಕ್‌ ಆಡಳಿತ ಮಂಡಳಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.