
ಬೆಂಗಳೂರು: ಶ್ರದ್ಧೆಯಿಂದ ಓದಿ ಸಮಚಿತ್ತದಿಂದ ಮನನ ಮಾಡಿಕೊಂಡು, ಒತ್ತಡಕ್ಕೆ ಒಳಗಾಗದೆ ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ, ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
‘ಎಸ್‌ಎಸ್ಎಲ್‌ಸಿ, ಪಿಯು ಪರೀಕ್ಷೆ ನಿರ್ಭೀತಿ ಯಿಂದ ಎದುರಿಸುವುದು ಹೇಗೆ’ ಎಂಬ ವಿಷಯ ಕುರಿತು ‘ಪ್ರಜಾವಾಣಿ’ ಶನಿವಾರ ಹಮ್ಮಿಕೊಂಡಿದ್ದ ಫೋನ್‌ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಇಬ್ಬರೂ ‘ಪೂರ್ವಭಾವಿ ಪರೀಕ್ಷೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಅಧಿಕ ಅಂಕಗಳಿಕೆಯ ಗೀಳಿಗೆ ಬೀಳಬಾರದು, ಭೀತಿಗೆ ಆಸ್ಪದ ಕೊಡಬಾರದು’ ಎಂದು ಕಿವಿಮಾತು ಹೇಳಿದರು.
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶ ವೃದ್ಧಿಗೆ ಶಾಲಾ ಶಿಕ್ಷಣ ಇಲಾಖೆ ಕಳೆದ ಜೂನ್‌ನಿಂದಲೇ ಸಿದ್ಧತೆಗಳನ್ನು ಆರಂಭಿಸಿತ್ತು. 25 ಅಂಶಗಳ ಪಟ್ಟಿ ಸಿದ್ಧಪಡಿಸಿ ಪ್ರತಿ ಶಾಲೆ–ಕಾಲೇಜಿನಲ್ಲೂ ಅನುಷ್ಠಾನಗೊಳಿಸಲು ಸೂಚಿಸಿತ್ತು. ಮಾರ್ಗಸೂಚಿಗಳನ್ನು ಪಾಲಿಸಿದ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರುವುದು ನಿಶ್ಚಿತ. ಅಂತಹ ಶಾಲೆಗಳಲ್ಲಿ ಮಕ್ಕಳು ಶೈಕ್ಷಣಿಕ ವರ್ಷದ ಆರಂಭದಿಂದಲೇ ಪಾಠಗಳನ್ನು ಮನನ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಓದನ್ನು ನಿರ್ಲಕ್ಷಿಸಿರುವವರು ಪರೀಕ್ಷೆ ಹತ್ತಿರ ಬಂದಂತೆ ಒತ್ತಡಕ್ಕೆ ಒಳಗಾಗುತ್ತಾರೆ. ಪ್ರತಿ ದಿನವೂ ಮಿತವಾಗಿ ಓದಿದರೆ ಒತ್ತಡಕ್ಕೆ ಒಳಗಾಗುವ ಅವಕಾಶವೇ ಬರುವುದಿಲ್ಲ ಎಂದರು.
*ಒತ್ತಡ ಹೆಚ್ಚಾಗಿ, ಓದಿಗೆ ಗಮನ ಹರಿಸಲು ಆಗುತ್ತಿಲ್ಲವಲ್ಲ?- ಜಯಲಕ್ಷ್ಮೀ, ಬಿಜಿಎಸ್ಎಸ್ ಶಾಲೆ, ಹೊಸಕೋಟೆ
ತಯಾರಿ ಇಲ್ಲದಿದ್ದಾಗ ಪರೀಕ್ಷೆಯ ಆತಂಕ ಸಹಜ. ಜೂನ್ ತಿಂಗಳಿನಿಂದಲೇ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ. ಎರಡು ಪೂರ್ವಭಾವಿ ಪರೀಕ್ಷೆ ನಡೆಸಲಾಗಿದ್ದು, ಸೋಮವಾರದಿಂದ ಮೂರನೇ ಪರೀಕ್ಷೆ ನಡೆಯಲಿದೆ. ಮೂರು ಪರೀಕ್ಷೆ ಬರೆದ ಮೇಲೆ ಮುಖ್ಯ ಪರೀಕ್ಷೆ ಬರೆಯುವುದು ಸುಲಭ.
*ಪರೀಕ್ಷೆ–1 ಬರೆಯಲು ಆಗದಿದ್ದರೆ, ಪರೀಕ್ಷೆ–2 ಬರೆಯಬಹುದೇ?- ಧನುಷ್, ಮೈಸೂರು, ಕುವೆಂಪು ಶಾಲೆ
ಪರೀಕ್ಷೆ–1ಕ್ಕೆ ನೋಂದಣಿ ಮಾಡಿಕೊಂಡು ಬರೆಯಲು ಆಗದಿದ್ದರೆ ಪರೀಕ್ಷೆ–2 ಬರೆದು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಬಹುದು. ಆದರೆ, ಪರೀಕ್ಷೆ–1ಕ್ಕೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
*ಅಪಘಾತದಲ್ಲಿ ಕಾಲು ಮುರಿದಿದ್ದು, ಪರೀಕ್ಷೆ ಬರೆಯಲು ಸೌಲಭ್ಯ ಇದೆಯಾ?-ಮಂಜುಮಣಿ, ವಿವೇಕಾನಂದ ಗ್ರಾಮಾಂತರ ಪ್ರೌಢ ಶಾಲೆ, ದಕ್ಷಿಣ ಕನ್ನಡ
ದೈಹಿಕ ನ್ಯೂನತೆಯ ವಿದ್ಯಾರ್ಥಿಗಳಿಗಾಗಿಯೇ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಗಾಲಿ ಕುರ್ಚಿ ಸಹ ಇದೆ. ಮುಖ್ಯ ಶಿಕ್ಷಕರ ಮೂಲಕ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಪತ್ರ ಬರೆಯಿಸಿದರೆ, ಸೂಕ್ತ ವ್ಯವಸ್ಥೆ ಮಾಡುತ್ತಾರೆ.
*ನೀಲನಕ್ಷೆ ಪ್ರಕಾರವೇ ಪ್ರಶ್ನೆ ಪತ್ರಿಕೆ ಬರಲಿದೆಯೇ?-ಮಂಜುನಾಥ್, ಸರ್ಕಾರಿ ಪ್ರೌಢಶಾಲೆ, ಬಾಗೇಪಲ್ಲಿ
ನೀಲನಕ್ಷೆ ಪ್ರಕಾರವೇ ಪ್ರಶ್ನೆ ಪತ್ರಿಕೆ ಬರುತ್ತದೆ. ಈಗಾಗಲೇ ಪೂರ್ವಭಾವಿ ಪರೀಕ್ಷೆಯಲ್ಲಿ ಪ್ರಶ್ನೆ ಬಂದಿರುವುದು ಮನವರಿಕೆ ಆಗಿದೆ. ಅದೇ ರೀತಿ ಅಂತಿಮ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಇರುತ್ತದೆ.
*ಪಠ್ಯಗಳ ಬೋಧನೆ ಪೂರ್ಣಗೊಂಡಿರುವು ದಿಲ್ಲ. , ಹಲವರಿಗೆ ಪರೀಕ್ಷೆ ಕಷ್ಟವಾಗುತ್ತಿದೆ?-ರಾಮಚಂದ್ರ, ಪೋಷಕ, ಶಿವಮೊಗ್ಗ
ಆಯಾ ಶಾಲಾ ವ್ಯಾಪ್ತಿಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಅಂತಹ ಶಾಲೆಗಳ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತಾರೆ. ಈ ವಿಚಾರವನ್ನು ಗಮನದಲ್ಲಿರಿಸಿಕೊಂಡಿದ್ದು ಮಂಡಳಿಯಿಂದಲೂ ಸೂಚನೆ ನೀಡಲಾಗುವುದು.
*ಮಗಳು ದ್ವಿತೀಯ ಪರೀಕ್ಷೆ ಓದುತ್ತಿದ್ದಾಳೆ. ಓದಿರುವುದು ಮರೆತು ಹೋಗುತ್ತಿದ್ದು, ಜ್ಞಾಪಕ ಶಕ್ತಿ ಕಡಿಮೆ ಆಗುತ್ತಿದೆಯಲ್ಲ?-ಮೇಘಾನಂದ, ಪೋಷಕ, ನ್ಯಾಮತಿ ತಾಲ್ಲೂಕು
ಮೊದಲ ಬಾರಿಗೆ ಮಂಡಳಿ ಪರೀಕ್ಷೆ ಬರೆಯುತ್ತಿರುವ ಕಾರಣಕ್ಕೆ ಕೆಲವರು ಆತಂಕಕ್ಕೆ ಒಳಗಾಗುತ್ತಾರೆ. ಉಪನ್ಯಾಸಕರನ್ನು ಭೇಟಿ ಮಾಡಿ, ಮಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಬರೆದ ಉತ್ತರದ ಮಾಹಿತಿ ಪಡೆಯಬಹುದು. ಪೋಷಕರು ಒತ್ತಡ ಹಾಕದೆ ಪ್ರೋತ್ಸಾಹಿಸಬೇಕು.
ವಿಜ್ಞಾನ ವಿಷಯ ಓದಿದರೂ ನೆನಪಾಗುತ್ತಿಲ್ಲ?-ಶ್ವೇತಾ, ಜಿಎಸ್‌ಎಸ್ ಶಾಲೆ, ಧಾರವಾಡ
ಪ್ರಯತ್ನ ಮಾಡಬೇಕು. ಪರೀಕ್ಷೆ–1ರಲ್ಲಿ ವಿಫಲರಾದರೆ ಮತ್ತೊಮ್ಮೆ ಪರೀಕ್ಷೆ ಬರೆದು, ಹೆಚ್ಚಿನ ಅಂಕ ಗಳಿಸಲು ಅವಕಾಶ ಇದೆ. ಮಾದರಿ ಪ್ರಶ್ನೆ ಪತ್ರಿಕೆ ಕಡೆಗೂ ಗಮನಹರಿಸಬೇಕು. ಶಿಕ್ಷಕರ ಜತೆ ಸಂಪರ್ಕದಲ್ಲಿದ್ದು, ಗೊಂದಲ ನಿವಾರಿಸಿಕೊಳ್ಳಬಹುದು.
ನಾಲ್ಕು ದಿನ ಹಾಜರಾತಿ ಕಡಿಮೆ ಇದೆ ಎಂಬ ಕಾರಣಕ್ಕೆ ಪ್ರವೇಶ ಪತ್ರ ನೀಡುತ್ತಿಲ್ಲ?-ಮೊಹಮದ್ ಫಯಾಜ್, ವಿದ್ಯಾರ್ಥಿ ಸಹೋದರ, ಚಿತ್ತಾಪುರ
ಪ್ರತಿ ವಿದ್ಯಾರ್ಥಿಗೆ ಶೇ 75 ಹಾಜರಾತಿ ಕಡ್ಡಾಯ. 75ಕ್ಕಿಂತ ಹಾಜರಾತಿ ಕಡಿಮೆ ಇದ್ದರೆ ಸುಮಾರು 15 ದಿನ ಹೊಂದಾಣಿಕೆ ಮಾಡಲು ಮುಖ್ಯ ಶಿಕ್ಷಕರಿಗೆ ಅಧಿಕಾರ ಇದೆ. ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಮಂಡಳಿಯಿಂದಲೂ ಸೂಚನೆ ನೀಡಲಾಗುವುದು
ಪ್ರಮುಖ ಸಲಹೆ
l ಮಕ್ಕಳಲ್ಲಿ ಭಯ ತುಂಬಬಾರದು
l ಇತರೆ ಮಕ್ಕಳ ಜ್ಞಾನದ ಜತೆಗೆ ಹೋಲಿಕೆ ಬೇಡ
l ಸತತ ಅಭ್ಯಾಸವೇ ತೇರ್ಗಡೆಗೆ ಮೆಟ್ಟಿಲು
l ಶಾಲಾ ಪರೀಕ್ಷೆಗಳು ಯಶಸ್ಸಿಗೆ ಸಹಕಾರಿ
l ಪರೀಕ್ಷಾ ಸಮಯದಲ್ಲಿ ವಿಶ್ರಾಂತಿ ಅಗತ್ಯ
ಮಂಡಳಿ ನೀಡಿದ ಸೌಲಭ್ಯ
ಮಾದರಿ ಪ್ರಶ್ನೆಪತ್ರಿಕೆಗಳು
ಪಠ್ಯ ಆಧಾರಿತ ಪ್ರಶ್ನೆಗಳು
ಪ್ರಶ್ನೆಪತ್ರಿಕೆಯ ನೀಲನಕ್ಷೆ
ಮಾರ್ಚ್ 5ರಿಂದ ಫೋನ್‌ಇನ್
ಮಕ್ಕಳ ಆರೋಗ್ಯದತ್ತ ಪೋಷಕರು ನಿಗಾವಹಿಸಬೇಕು. ದ್ರವ ಮತ್ತು ಪೌಷ್ಟಿಕ ಆಹಾರ ನೀಡಬೇಕು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾರ್ಚ್ 5ರಿಂದ 15ರವರೆಗೆ ಪರೀಕ್ಷಾ ಮಂಡಳಿಯೇ ಫೋನ್ ಇನ್ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ನಿರ್ದೇಶಕ ಎಚ್.ಎನ್.ಗೋಪಾಲಕೃಷ್ಣ ಹೇಳಿದರು.
ಆರು ವಿಷಯಗಳ ವಿಷಯ ತಜ್ಞರು ಹಾಗೂ ನಿಮ್ಹಾನ್ಸ್ ವೈದರು ಫೋನ್‌ಇನ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮಕ್ಕಳು ಮತ್ತು ಪೋಷಕರು ಆತಂಕ ಹಾಗೂ ಗೊಂದಲ ನಿವಾರಿಸಿ
ಕೊಳ್ಳಬಹುದು. ಇಲಾಖೆ ಸಹಾಯವಾಣಿ 080–23310075, 080–23310076 ಸಂಪರ್ಕಿಸಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.