ADVERTISEMENT

ಅಂಕಪಟ್ಟಿ ತಿದ್ದಿದ ಆರೋಪ: ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

‘ಅಧೀನ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 19:53 IST
Last Updated 22 ಸೆಪ್ಟೆಂಬರ್ 2018, 19:53 IST

ನವದೆಹಲಿ: ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ತಿದ್ದಿರುವ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ಮಹಿಳಾ ಸಿಬ್ಬಂದಿಯ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂ ಕೋರ್ಟ್‌, ಅರ್ಜಿಯನ್ನು ವಜಾಗೊಳಿಸಿದೆ.

ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಅಧೀನ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಸ್‌.ಎ. ಬೋಬಡೆ ಹಾಗೂ ಎಲ್‌.ನಾಗೇಶ್ವರರಾವ್‌ ಅವರಿದ್ದ ಪೀಠ ಅರ್ಜಿದಾರರಿಗೆ ಸೂಚಿಸಿದೆ. 1960ರ ಮೇ 12ರ ಬದಲಿಗೆ, 1964ರ ಮೇ 12 ಎಂದು ಜನ್ಮ ದಿನಾಂಕವನ್ನು ತಿದ್ದಿರುವ ಆರೋಪಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮನಶಾಸ್ತ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಮಾಲಿನಿ ಹಾಗೂ ಅವರ ಪತಿಯ ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ
ಲಾಗಿತ್ತು. ಈ ಪ್ರಕರಣವನ್ನು ಕೈಬಿಡಲು ನಿರಾಕರಿಸಿ ಕಳೆದ ಜುಲೈ 5ರಂದು ರಾಜ್ಯ ಹೈಕೋರ್ಟ್‌ ತೀರ್ಪು ನೀಡಿದ್ದು, ಅದನ್ನು ಪ್ರಶ್ನಿಸಿ ಈ ಮೇಲ್ಮನವಿ ಸಲ್ಲಿಸಲಾಗಿತ್ತು.

ಪದವಿ ಪ್ರಮಾಣಪತ್ರಗಳೊಂದಿಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯನ್ನು ತಾಳೆ ಮಾಡಿ ನೋಡಿದಾಗ, ಮಾಲಿನಿ ಅವರು ಕೇವಲ 16ನೇ ವಯಸ್ಸಿಗೇ ಪದವಿ ಮತ್ತು 18ನೇ ವಯಸ್ಸಿಗೇ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ಜನ್ಮದಿನವನ್ನು ತಿದ್ದಿರುವುದು ಇದರಿಂದ ಗೊತ್ತಾಗುತ್ತದೆ ಎಂದು ವಕೀಲ ಜಿ.ಎಸ್‌. ಪ್ರದೀಪ್‌ಕುಮಾರ್‌ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ
ಕೊಂಡು ವಿಚಾರಣೆ ನಡೆಸಲಾಗಿತ್ತು. ಈ ವಿಶೇಷ ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸುವುದು ಅಸಾಧ್ಯ ಎಂದು ತಿಳಿಸಿದ ನ್ಯಾಯುಪೀಠ, ಕಾನೂನುಬದ್ಧವಾಗಿ ಅಧೀನ ನ್ಯಾಯಾಲಯದಲ್ಲೇ ಮನವಿ ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.