
ಬೆಂಗಳೂರು: ಐಕ್ಯು ವೆಂಚರ್ಸ್ ವತಿಯಂದ ಹೊಸೂರು ರಸ್ತೆಯಲ್ಲಿ ಮಡಿವಾಳ ಸಂಚಾರ ಪೊಲೀಸ್ ಠಾಣೆ ಎದುರು ನವೋದ್ಯಮಿಗಳಿಗಾಗಿ ‘ಸ್ಟಾರ್ಟ್‌ಅಪ್ ಪಾರ್ಕ್’ ನಿರ್ಮಿಸಲಾಗಿದ್ದು, ಇದೇ 7ರಂದು ಈ ಪಾರ್ಕ್ ಉದ್ಘಾಟನೆಯಾಗಲಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಕ್ಯು ವೆಂಚರ್ಸ್ ಅಧ್ಯಕ್ಷ ಶಫಿ ಶೌಕತ್, ‘ದೇಶದ ಪ್ರಥಮ ‘ಸ್ಟಾರ್ಟ್‌ಅಪ್ ಪಾರ್ಕ್’ ಇದಾಗಿದೆ. 20 ಸಾವಿರ ಚದರ ಅಡಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಕಾರ್ಯನಿರ್ವಹಣೆಗೆ ಸ್ಥಳಾವಕಾಶ ಒದಗಿಸುವ ಜತೆಗೆ, ನವೋದ್ಯಮ ಪ್ರಾರಂಭಕ್ಕೆ ಹಾಗೂ ನವೋದ್ಯಮ ನಡೆಸಲು ಅಗತ್ಯವಿರುವ ಎಲ್ಲ ಸೌಲಭ್ಯಗಳು ದೊರೆಯಲಿವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪಾರ್ಕ್ ಉದ್ಘಾಟಿಸುತ್ತಾರೆ’ ಎಂದು ತಿಳಿಸಿದರು.
‘ಬೆಂಗಳೂರಿನಲ್ಲಿ ನವೋದ್ಯಮಕ್ಕೆ ಉತ್ತಮ ಅವಕಾಶ ಇರುವುದರಿಂದ ಇಲ್ಲಿ ಸ್ಟಾರ್ಟ್‌ಅಪ್ ಪಾರ್ಕ್ ನಿರ್ಮಿಸಲಾಗಿದೆ. 2030ರ ವೇಳೆಗೆ 10 ಸಾವಿರ ನವೋದ್ಯಮಗಳನ್ನು ಪೋಷಿಸಿ, 1 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಈ ಪಾರ್ಕ್ ನಗರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುವ ವಿಶ್ವಾಸವಿದೆ. ಅಗತ್ಯ ಮೂಲಸೌಕರ್ಯದ ಜತೆಗೆ ನವೋದ್ಯಮ ಶಾಲೆ, ಹೂಡಿಕೆದಾರರ ಸ್ಟುಡಿಯೊ, ಮಾರ್ಗದರ್ಶನ ಕೇಂದ್ರ, ಕಾರ್ಯಕ್ರಮಗಳಿಗೆ ಸ್ಥಳಾವಕಾಶ, ಗ್ರಂಥಾಲಯ, ಪ್ರಯೋಗಾಲಯ ಸೇರಿ ಹಲವು ಸೌಲಭ್ಯ ಹೊಂದಿದೆ’ ಎಂದರು.
‘ಈ ಪಾರ್ಕ್ ಉದ್ಘಾಟನೆ ಪ್ರಯುಕ್ತ ನವೆಂಬರ್ ತಿಂಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳಾ ಉದ್ಯಮಿಗಳ ಸಮಾವೇಶ, ಹೂಡಿಕೆದಾರರ ಶೃಂಗ ಸೇರಿ ವಿವಿಧ ಸಮಾವೇಶ ಆಯೋಜಿಸಲಾಗಿದೆ’ ಎಂದು ಹೇಳಿದರು.