ADVERTISEMENT

ಬೆಂಗಳೂರು: ಸಮಸ್ಯೆಯ ಆಗರ ಚಾಮರಾಜಪೇಟೆ ವಸತಿ ಶಾಲೆ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 14:31 IST
Last Updated 7 ಆಗಸ್ಟ್ 2023, 14:31 IST
ನಗರದ ಚಾಮರಾಜಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಸಮಸ್ಯೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹಾಗೂ ಸದಸ್ಯರು ಆಲಿಸಿದರು.
ನಗರದ ಚಾಮರಾಜಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳ ಸಮಸ್ಯೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹಾಗೂ ಸದಸ್ಯರು ಆಲಿಸಿದರು.   

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹಾಗೂ ಸದಸ್ಯರು ಸೋಮವಾರ ದಿಢೀರ್ ಭೇಟಿ ನೀಡಿ ಶಾಲೆಯ ಸ್ಥಿತಿ ಪರಿಶೀಲಿಸಿದರು. ರಾಜ್ಯದ ವಿವಿಧ ಜಿಲ್ಲೆಯ 200 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ಧಾರೆ.

ವಸತಿ ಶಾಲೆಯ ತರಗತಿ ನಡೆಯುವ ಕೊಠಡಿಗಳು ಶಿಥಿಲಗೊಂಡಿದ್ದು, ಸಣ್ಣ ಮಳೆಗೂ ಕೊಠಡಿಗಳು ಸೋರುತ್ತಿವೆ. ಕುಡಿಯಲು ಶುದ್ಧ ನೀರು ಲಭಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಸ್ನಾನದ ಕೋಣೆಯಲ್ಲಿ ಬಳಸಿದ ನೀರು ಸರಾಗವಾಗಿ ಹೊರಗೆ ಹರಿಯುತ್ತಿಲ್ಲ. ಮಲಗಲು ಎಲ್ಲರಿಗೂ ಕಾಟ್, ಬೆಡ್‌ಗಳ ವ್ಯವಸ್ಥೆ ಇಲ್ಲ. ತರಗತಿಯಲ್ಲಿ ಡೆಸ್ಕ್‌ ವ್ಯವಸ್ಥೆ ಇಲ್ಲ. ಫ್ಯಾನ್‌ ಕೆಟ್ಟು ಹೋಗಿದೆ ಎಂದು ಹೇಳಿದರು.

ADVERTISEMENT

10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವ ಡೆಸ್ಕ್‌ಗಳನ್ನು ಕೊಡಿಸಿ ಎಂದು ಕೋರಿದರು.

ರಾಜಧಾನಿಯ ವಸತಿ ಶಾಲೆಯ ಸ್ಥಿತಿಯೇ ಹೀಗಾದರೆ ಗ್ರಾಮೀಣ ಪ್ರದೇಶಗಳ ವಸತಿ ಶಾಲೆಗಳ ಪರಿಸ್ಥಿತಿ ಹೇಗೆ ಎಂದು ಕೆ. ನಾಗಣ್ಣಗೌಡ ಪ್ರಶ್ನಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದೇ ನಡೆಯಬೇಕು. ಮಕ್ಕಳ ರಕ್ಷಣಾ ನೀತಿ ಜಾರಿಗೆ ಬಂದಿದೆ. ಆದರೆ, ಈ ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ ಹಾಗೂ ಮಕ್ಕಳ ಸಂರಕ್ಷಣಾ ಸಮಿತಿ ರಚಿಸಿಲ್ಲ ಎಂದು ಸದಸ್ಯ ಶಶಿಧರ ಕೋಸಂಬೆ ಬೇಸರ ವ್ಯಕ್ತಪಡಿಸಿದರು.

ಶಾಲೆಯ ಅಡುಗೆ ಕೋಣೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶುಚಿತ್ವ ಕಾಪಾಡಬೇಕು. ಕಸ ಗುಡಿಸಲು ಶಾಲಾ ಮಕ್ಕಳನ್ನು ಬಳಕೆ ಮಾಡಿಕೊಳ್ಳಬಾರದು ಎಂದು ಸದಸ್ಯ ಶೇಖರ್ ಗೌಡ ರಾಮತನಾಳ ಅವರು ವಾರ್ಡ್‌ನ ಶಕುಂತಾ ಅವರಿಗೆ ತಾಕೀತು ಮಾಡಿದರು. ವಸತಿ ಶಾಲೆಯ ಪ್ರಾಂಶುಪಾಲರಾದ ಜ್ಯೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.