ಮಾನವ ಹಕ್ಕುಗಳ ಆಯೋಗ
ಬೆಂಗಳೂರು: ‘ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ನೋಂದಾಯಿಸಲಾಗಿದ್ದ 10,209 ಪ್ರಕರಣಗಳಲ್ಲಿ 7,182 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಸೂಕ್ತ ಶಿಫಾರಸು ಮಾಡಲಾಗಿದೆ’ ಎಂದು ಆಯೋಗ ತಿಳಿಸಿದೆ.
‘ಈ ಎಲ್ಲ ಪ್ರಕರಣಗಳನ್ನು ನ್ಯಾಯಮಂಡಳಿಯ ಪೂರ್ಣ ಮತ್ತು ಏಕಸದಸ್ಯ ಪೀಠಗಳಲ್ಲಿ ವಿಚಾರಣೆ ನಡೆಸಿ ಇತ್ಯರ್ಥಗೊಳಿಸಲಾಗಿದ್ದು, ಆಯೋಗವು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರಕರಣಗಳ ತುರ್ತು ಇತ್ಯರ್ಥಕ್ಕಾಗಿ ಆಯಾ ಜಿಲ್ಲಾಧಿಕಾರಿ, ಎಸ್‌ಪಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಸುವ ನೂತನ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ’ ಎಂದು ತಿಳಿಸಿದೆ
‘ಪ್ರಕರಣಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಇತ್ಯರ್ಥಗೊಳಿಸುವುದಲ್ಲದೇ, ಆಯೋಗವು ಹಲವಾರು ಜೈಲು, ಪೊಲೀಸ್ ಠಾಣೆ, ವಸತಿನಿಲಯ, ಬಸ್ ನಿಲ್ದಾಣಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಕೆಲಸ ಮಾಡುತ್ತಿದೆ. ಆಯೋಗದ ಕಾರ್ಯನಿರ್ವಹಣೆ, ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ’ ಎಂದು ಪ್ರಕಟಣೆ ತಿಳಿಸಿದೆ.
ಆಯೋಗದ ಅಧ್ಯಕ್ಷರಾಗಿ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ, ಸದಸ್ಯರಾಗಿ ಎಸ್.ಕೆ.ವಂಟಿಗೋಡಿ ಹಾಗೂ ಟಿ.ಶಾಮ್ ಭಟ್ ಅವರು 2023ರ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.