ADVERTISEMENT

ಗೆದ್ದರೂ–ಸೋತರೂ ಪಕ್ಷ ದೊಡ್ಡದು: ಮಾರ್ಗರೇಟ್‌ ಆಳ್ವ

80 ಶಿಬಿರಾರ್ಥಿಗಳಿಗೆ ಬಿ– ಕ್ಲಿಪ್‌ ಪದವಿ ಪ್ರಮಾಣಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:46 IST
Last Updated 13 ಜುಲೈ 2019, 19:46 IST
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಬಿ– ಕ್ಲಿಪ್‌ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಇತಿಹಾಸ ತಜ್ಞ ಸುರೇಶ್‌ ಮೂನಾ, ಬಿ–ಪ್ಯಾಕ್‌ ಸದಸ್ಯ ಸಾಯಿಪ್ರಸಾದ್‌ ರಾವ್‌, ಸಿಇಒ ರೇವತಿ ಅಶೋಕ್‌, ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ, ಹಿರಿಯ ರಾಜಕಾರಣಿ ಮಾರ್ಗರೇಟ್‌ ಆಳ್ವ, ನಗರ ಯೋಜನಾ ತಜ್ಞ ಅಶ್ವಿನ್‌ ಮಹೇಶ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಬಿ– ಕ್ಲಿಪ್‌ ಪದವಿ ಪ್ರಮಾಣ ಪತ್ರ ವಿತರಿಸಲಾಯಿತು. ಇತಿಹಾಸ ತಜ್ಞ ಸುರೇಶ್‌ ಮೂನಾ, ಬಿ–ಪ್ಯಾಕ್‌ ಸದಸ್ಯ ಸಾಯಿಪ್ರಸಾದ್‌ ರಾವ್‌, ಸಿಇಒ ರೇವತಿ ಅಶೋಕ್‌, ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ, ಹಿರಿಯ ರಾಜಕಾರಣಿ ಮಾರ್ಗರೇಟ್‌ ಆಳ್ವ, ನಗರ ಯೋಜನಾ ತಜ್ಞ ಅಶ್ವಿನ್‌ ಮಹೇಶ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:‘ಹಿಂದಿನ ರಾಜಕಾರಣಿಗಳಿಗೆ ಪಕ್ಷದ ಬಗ್ಗೆ ನಿಯತ್ತು ಇತ್ತು. ಸ್ಥಾನಮಾನ ದೊರೆಯಲು ಪಕ್ಷವೇ ಕಾರಣ ಎಂಬ ಕೃತಜ್ಞತೆ ಇತ್ತು. ಸೋತರೂ–ಗೆದ್ದರೂ ಪಕ್ಷವೇ ದೊಡ್ಡದು ಎಂದುಕೊಳ್ಳುತ್ತಿದ್ದೆವು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ’ ಎಂದು ಹಿರಿಯ ರಾಜಕಾರಣಿ ಮಾರ್ಗರೇಟ್‌ ಆಳ್ವ ಹೇಳಿದರು.

ಬಿ–ಪ್ಯಾಕ್‌ ವತಿಯಿಂದ ಏರ್ಪಡಿಸುವ ನಾಗರಿಕ ನಾಯಕತ್ವ ತರಬೇತಿ ಕಾರ್ಯಕ್ರಮದಡಿ (ಬಿ–ಕ್ಲಿಪ್‌) ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ವಿತರಿಸಿ ಅವರು ಶನಿವಾರ ಮಾತನಾಡಿದರು.

‘ರಾಜಕೀಯ ಈಗ ಹಣದ ಆಟವಾಗಿದೆ. ₹ 50 ಕೋಟಿ ಕೊಟ್ಟರೆ ಈ ಪಕ್ಷ, ₹ 60 ಕೋಟಿ ಕೊಟ್ಟರೆ ಆ ಪಕ್ಷ ಎನ್ನುತ್ತಿದ್ದಾರೆ. ದೂರದೃಷ್ಟಿ, ಬದ್ಧತೆ ಇರುವ ನಾಯಕರು ಕಾಣುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಚುನಾವಣೆಯಲ್ಲಿ ರಾಜಕಾರಣಿಗಳ ಕುಟುಂಬದವರಿಗೇ ಟಿಕೆಟ್‌ ನೀಡಲಾಗುತ್ತಿದೆ. ಈ ವಿಷಯದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ. ಬಹಿರಂಗವಾಗಿ ಟೀಕಿಸಿದರೂ, ಪರದೆ ಹಿಂದೆ ಎಲ್ಲರೂ ಒಂದಾಗುತ್ತಾರೆ’ ಎಂದು ತಿಳಿಸಿದರು.

ಬಿ–ಪ್ಯಾಕ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ‘ಬೆಂಗಳೂರಿನಲ್ಲಿ ಉತ್ತಮ ಆಡಳಿತ ಕಾಣಬೇಕೆಂದರೆ, ಈ ನಗರ ನನ್ನದೆಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು’ ಎಂದರು.

ತಕ್ಷಶಿಲಾ ಸಂಸ್ಥೆಯ ಸಹ ಸಂಸ್ಥಾಪಕ ನಿತಿನ್‌ ಪೈ, ‘ಭವಿಷ್ಯದ ನಾಯಕರಾಗುವವರು ಸಂವಿಧಾನದ ಮೌಲ್ಯ
ಗಳನ್ನು ಎತ್ತಿಹಿಡಿಯಬೇಕು’ ಎಂದು ಸಲಹೆ ನೀಡಿದರು.

ಬಿ–ಕ್ಲಿಪ್ 4ನೇ ಮತ್ತು 5ನೇ ಆವೃತ್ತಿಗಳಲ್ಲಿ 80 ನಾಯಕರಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಈ ಶಿಬಿರಾರ್ಥಿಗಳು ವಿವಿಧ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಿದ್ದು, ವಿವಿಧ ವೃತ್ತಿ ಹಾಗೂ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಾರೆ.

ಕಳೆದ ಬಿಬಿಎಂಪಿ ಚುನಾವಣೆಗಳಲ್ಲಿ, 23 ಬಿ–ಕ್ಲಿಪ್ ನಾಯಕರು ಸ್ಪರ್ಧಿಸಿದ್ದರು. ಈ ಪೈಕಿ ಮೂವರು 500ಕ್ಕೂ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು. ಬಿ–ಕ್ಲಿಪ್ ಎರಡನೇ ತಂಡದ ಶಿಬಿರಾರ್ಥಿಯಾಗಿದ್ದ ಸಂಪತ್ ಕುಮಾರ್ ಮೇಯರ್‌ ಕೂಡ ಆಗಿದ್ದಾರೆ.

‘ಅಭಿವೃದ್ಧಿ ಕೆಲಸ ಮಾಡಿಯೂ ಸೋತೆ’
ಉತ್ತರ ಕನ್ನಡ ಜಿಲ್ಲೆಯ ಸಂಸದೆಯಾಗಿದ್ದಾಗ ಐದು ವರ್ಷಗಳಲ್ಲಿ ₹10 ಸಾವಿರ ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೆ. ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಸೇರಿದಂತೆ ವಿವಿಧ ಯೋಜನೆಗಳ ಅನುದಾನವನ್ನು ಜಿಲ್ಲೆಯ ಅಭಿವೃದ್ಧಿಗೆ ವಿನಿಯೋಗಿಸಿದರೂ, 2004ರ ಚುನಾವಣೆಯಲ್ಲಿ ಪರಾಭವಗೊಂಡೆ. ಸಾಯುವವರೆಗೆ ಈ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಬಾರದು ಎಂದೆನಿಸಿಬಿಟ್ಟಿತು’ ಎಂದು ಮಾರ್ಗರೇಟ್‌ ಆಳ್ವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.