ADVERTISEMENT

ಬೆಂಗಳೂರು | ಇಬ್ಬರು ಹೆಣ್ಣು ಮಕ್ಕಳ ಕೊಂದಿದ್ದ ಮಲತಂದೆಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 15:14 IST
Last Updated 7 ಏಪ್ರಿಲ್ 2025, 15:14 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಅಮೃತಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ನೆಲಸಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದ ಮಲತಂದೆಗೆ ನಗರದ ಸಿಸಿಎಚ್‌ 51ನೇ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಸುಮಿತ್‌ ಮೋಹನ್‌ (31) ಶಿಕ್ಷೆಗೆ ಒಳಗಾದ ಅಪರಾಧಿ.

ADVERTISEMENT

ಕೃತ್ಯ ನಡೆದ 24 ಗಂಟೆಯೊಳಗೇ ಅಪರಾಧಿಯನ್ನು ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿ, ನವೆಂಬರ್‌ನಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶ ಸಿ.ಬಿ.ಸಂತೋಷ್ ಅವರು ನಾಲ್ಕು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ, ಸುಮಿತ್‌ ಮೋಹನ್‌ ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ವಕೀಲರಾಗಿ ಬಿ.ಎಚ್‌.ಭಾಸ್ಕರ್ ವಾದ ಮಂಡನೆ ಮಾಡಿದ್ದರು.

ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಎಂ.ಅಂಬರೀಷ್‌ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಉತ್ತರ ಪ್ರದೇಶದ ಕುಟುಂಬವು ದಾಸರಹಳ್ಳಿಯ ಕಾವೇರಿ ಬಡಾವಣೆಯ ಬಾಡಿಗೆ ಮನೆಯೊಂದರ ಎರಡನೇ ಮಹಡಿಯಲ್ಲಿ ನೆಲಸಿತ್ತು. ಮನೆಯಲ್ಲಿ 14 ಹಾಗೂ 16 ವರ್ಷದ ಇಬ್ಬರು ಹೆಣ್ಣು ಮಕ್ಕಳು ತಾಯಿ ಹಾಗೂ ಮಲತಂದೆಯ ಜತೆಗೆ ನೆಲಸಿದ್ದರು. ಹೆಣ್ಣು ಮಕ್ಕಳ ತಾಯಿ ಅನಿತಾ ಅವರು ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಡೆಹ್ರಾಡೂನ್‌ನ ಸುಮಿತ್‌ ಮೋಹನ್‌ ಎಂಬಾತನ ಜತೆಗೆ ಒಂಬತ್ತು ವರ್ಷ ಹಿಂದೆ ಎರಡನೇ ಮದುವೆ ಆಗಿದ್ದರು. ಮೋಹನ್‌ ನಗರದಲ್ಲಿ ಫುಡ್‌ ಡೆಲಿವರಿ ಕೆಲಸ ಮಾಡುತ್ತಿದ್ದ. ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಹೆಣ್ಣು ಮಕ್ಕಳು ಸಮೀಪದ ಶಾಲೆಯಲ್ಲಿ ಓದುತ್ತಿದ್ದರು.

ತಾಯಿ ಇಲ್ಲದ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಜತೆಗೆ ಗಲಾಟೆ ನಡೆದು ಇಬ್ಬರನ್ನೂ ಕೊಲೆ ಮಾಡಿ ಅಪರಾಧಿ ಸುಮಿತ್‌ ಮೋಹನ್‌ ಪರಾರಿ ಆಗಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.