
ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವ ಉತ್ಸಾಹದಲ್ಲಿ ₹80 ಲಕ್ಷ ಸಾಲ ಮಾಡಿ ಖಿನ್ನತೆಗೆ ಒಳಗಾಗಿದ್ದ 29 ವರ್ಷದ ಯುವಕನಿಗೆ ನಿಮ್ಹಾನ್ಸ್ ವೈದ್ಯರು ಚಿಕಿತ್ಸೆ ನೀಡಿ ‘ವ್ಯಸನ’ಮುಕ್ತ ಗೊಳಿಸಿದ್ದಾರೆ. ‘ಷೇರು ವ್ಯವಹಾರದ ವ್ಯಸನ’ ಕೂಡ ಗುಣಪಡಿಸಬಹುದಾದ ಮಾನಸಿಕ ಕಾಯಿಲೆ ಎಂದು ಸಾಬೀತುಪಡಿಸಿದ್ದಾರೆ.
ಮೇಲ್ಮಧ್ಯಮ ಕುಟುಂಬದ ಯುವಕ, ನಾಲ್ಕು ವರ್ಷಗಳ ಹಿಂದೆ ಉಪ ಆದಾಯ ಗಳಿಸಲು ಮೊಬೈಲ್ ಟ್ರೇಡಿಂಗ್ ಅಪ್ಲಿಕೇಶನ್‌ಗಳಲ್ಲಿ ಹುಡುಕಾಟ ಆರಂಭಿಸಿದ್ದರು. ಸಣ್ಣ ಹೂಡಿಕೆ ಮಾಡುತ್ತಿದ್ದ ಅವರು ಕೆಲವೇ ಸಮಯದಲ್ಲಿ ಹೆಚ್ಚಿನ ಅಪಾಯ ಇರುವ ಇಂಟ್ರಾಡೇ, ಫ್ಯೂಚರ್ಸ್ ಆ್ಯಂಡ್ ಆಪ್ಷನ್ಸ್ (ಎಫ್ ಆ್ಯಂಡ್ ಒ) ವ್ಯಾಪಾರದಲ್ಲಿ ಹೂಡಿಕೆ ಮಾಡಲು ಶುರು ಮಾಡಿದ್ದರು. ಮಾರುಕಟ್ಟೆಯ ಏರಿಳಿತಗಳನ್ನು ಮೇಲ್ವಿಚಾರಣೆ ಮಾಡುತ್ತ ಗಂಟೆಗಟ್ಟಲೆ ಅದರಲ್ಲೇ ಮುಳುಗಿ ಹೋಗುತ್ತಿದ್ದರು. ವ್ಯವಹಾರದಿಂದ ಹೊರಗೆ ಇರುವ ಸಮಯದಲ್ಲಿ ಅವರು ತೀವ್ರ ಚಡಪಡಿಕೆ, ಆತಂಕಕ್ಕೆ ಒಳಗಾಗುತ್ತಿದ್ದರು ಎಂದು ನಿಮ್ಹಾನ್ಸ್ ವೈದ್ಯರು ತಿಳಿಸಿದ್ದಾರೆ.
ಷೇರು ವ್ಯವಹಾರ ನಿಯಂತ್ರಣ ತಪ್ಪಿ ನಷ್ಟ ಉಂಟಾದಾಗ ಇನ್ನಷ್ಟು ಹೂಡಿಕೆ ಮಾಡಲು ಡಿಜಿಟಲ್ ಸಾಲ ಅಪ್ಲಿಕೇಶನ್‌ಗಳತ್ತ ತಿರುಗಿದ್ದರು. ಅವರು ಒಟ್ಟು ₹80 ಲಕ್ಷ ಸಾಲ ತೆಗೆದುಕೊಂಡು ಹೂಡಿಕೆ ಮಾಡಿದ್ದರು.
ಈ ವ್ಯಸನವು ಅವರನ್ನು ಸಾಮಾಜಿಕವಾಗಿ ದೂರವಾಗಿರುವಂತೆ ಮಾಡಿತ್ತು. ಒಂಟಿಯಾಗಿರುವುದು, ನಿದ್ರೆ ಬಾರದಿರುವುದು, ಆರ್ಥಿಕ ನಷ್ಟವನ್ನು ಮರೆ ಮಾಚಲು ಕುಟುಂಬದ ಸದಸ್ಯರಿಗೆ ಸುಳ್ಳು ಹೇಳುವಂತೆ ಮಾಡಿತ್ತು.
ನಿಮ್ಹಾನ್ಸ್‌ನ ‘ಸರ್ವಿಸಸ್ ಫಾರ್ ಹೆಲ್ದಿ ಯೂಸ್ ಆಫ್ ಟೆಕ್ನಾಲಜಿ’ಯ (ಎಸ್‌ಎಚ್‌ಯುಟಿ ಕ್ಲಿನಿಕ್) ಡಾ.ಸುಬ್ರಮಣಿಯನ್ ಶಾರದಾ, ಡಾ. ರಾಜೇಶ್ ಕುಮಾರ್ ಮತ್ತು ಡಾ.ಮನೋಜ್ ಕೆ ಶರ್ಮ ಯುವಕನಿಗೆ ಚಿಕಿತ್ಸೆ ಮತ್ತು ಪ್ರಕರಣದ ಬಗ್ಗೆ ಸಂಶೋಧನೆಯನ್ನು ಒಟ್ಟೊಟ್ಟಿಗೆ ನಡೆಸಿದರು.
‘ಆನ್‌ಲೈನ್ ಗೇಮಿಂಗ್ ವ್ಯಸನದಿಂದ ಮುಕ್ತಗೊಳಿಸಲು ಬಳಸುವ ವಿಧಾನಗಳನ್ನೇ ಇಲ್ಲಿಯೂ ಅಳವಡಿಸಿಕೊಳ್ಳಲಾಯಿತು. ರೋಗಿಯ ಸಂಪೂರ್ಣ ನಿಯಂತ್ರಣ, ನಷ್ಟ ಮತ್ತು ಸಾಲದ ಸ್ಥಿತಿಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿತು’ ಎಂದು ಕ್ಲಿನಿಕಲ್ ಸೈಕಾಲಜಿಯ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧಕರಲ್ಲಿ ಒಬ್ಬರಾದ ಡಾ.ರಾಜೇಶ್ ಕುಮಾರ್ ತಿಳಿಸಿದರು.
ಯುವಕನಿಗೆ ಎಸ್‌ಎಚ್‌ಯುಟಿ ಕ್ಲಿನಿಕ್‌ನಲ್ಲಿ ಬಹುಮಾದರಿಯ ವರ್ತನೆಯನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಯಿತು. ಡಿಜಿಟಲ್ ಉಪವಾಸ (ಡಿಜಿಟಲ್ ಬಳಸದೇ ಇರುವುದು), ಪ್ರಚೋದನೆಗೆ ಒಳಗಾಗದಂತೆ ನಿಯಂತ್ರಿಸುವುದು, ವಹಿವಾಟು ಅಪ್ಲಿಕೇಶನ್‌ಗಳಿಂದ ದೂರವಿರುವುದು ಮತ್ತು ಅವರ ಹಣಕಾಸಿನ ನಿಯಂತ್ರಣವನ್ನು ಕುಟುಂಬ ಸದಸ್ಯರಿಗೆ ವಹಿಸುವುದೂ ಇದರಲ್ಲಿ ಸೇರಿತ್ತು ಎಂದು ಮತ್ತೊಬ್ಬ ಸಂಶೋಧಕರಾದ ಡಾ.ಶಾರದಾ ಸುಬ್ರಮಣಿಯನ್ ಮಾಹಿತಿ ನೀಡಿದರು.
ಜೂಜಿನಂತೆ ಆವರಿಸುವ ಟ್ರೇಡಿಂಗ್
ಆನ್‌ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ 20 ಕೋಟಿಗೂ ಅಧಿಕ ಡಿಮ್ಯಾಟ್ ಖಾತೆಗಳು ಭಾರತದಲ್ಲಿವೆ. ಅದರಲ್ಲಿ ಶೇ 75ರಷ್ಟು ಖಾತೆಗಳು 30 ವರ್ಷದೊಳಗಿನವರದ್ದಾಗಿರುವುದು ಎಚ್ಚರಿಕೆ ಘಂಟೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಟ್ರೇಡಿಂಗ್ ಆ್ಯಪ್‌ಗಳು ಷೇರು ಮಾರುಕಟ್ಟೆಯನ್ನು ಒಂದು 'ಗೇಮ್'ನಂತೆ ಬಿಂಬಿಸುತ್ತವೆ. ತ್ವರಿತ ಲಾಭದ ಆಮಿಷ ಒಡ್ಡುತ್ತವೆ. ಒಮ್ಮೆ ಹೂಡಿಕೆ ಮಾಡಿದರೆ ಮತ್ತೆ ಮತ್ತೆ ಹೂಡುವಂತೆ ಮಾನಸಿಕ ಒತ್ತಡ ಉಂಟು ಮಾಡುವುದು ಕೇವಲ ಆರ್ಥಿಕ ಸಮಸ್ಯೆಯಲ್ಲ. ಇದು ಮಾನಸಿಕ ಅಸ್ವಸ್ಥತೆಯೂ ಆಗಿದ್ದು ಗುಣಪಡಿಸಬಲ್ಲ ಕಾಯಿಲೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.