ADVERTISEMENT

ತೆಂಗಿನ ನಾರಿನಿಂದ ಬಸ್‌ ತಂಗುದಾಣ

ಎಸ್‍ವಿಐಟಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ‌ವಿದ್ಯಾರ್ಥಿಗಳ ಹೊಸ ಪ್ರಯತ್ನ

ಎಂ.ಮನೋಹರ್
Published 17 ಜೂನ್ 2019, 20:23 IST
Last Updated 17 ಜೂನ್ 2019, 20:23 IST
ತೆಂಗಿನ ನಾರು ಬಳಸಿ ನಿರ್ಮಿಸಿರುವ ಬಸ್‌ ತಂಗುದಾಣ
ತೆಂಗಿನ ನಾರು ಬಳಸಿ ನಿರ್ಮಿಸಿರುವ ಬಸ್‌ ತಂಗುದಾಣ   

ಬೆಂಗಳೂರು: ರಾಜಾನುಕುಂಟೆಯ ಸಾಯಿ ವಿದ್ಯಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ತೆಂಗಿನ ನಾರಿನಿಂದ ಕಡಿಮೆ ವೆಚ್ಚದಲ್ಲಿಪರಿಸರಸ್ನೇಹಿ ಬಸ್‌ ತಂಗುದಾಣ ನಿರ್ಮಿಸಿದ್ದಾರೆ.‌

ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತಮ್ಮ ಕೊನೆಯ ಸೆಮಿಸ್ಟರ್‌ನಲ್ಲಿ ಯೋಜನೆ(ಪ್ರಾಜೆಕ್ಟ್‌ ವರ್ಕ್‌) ತಯಾರಿಸುವುದು ಸವಾಲಿನ ಕೆಲಸ. ಈ ಸವಾಲೇ ಹಲವು ಆವಿಷ್ಕಾರಗಳು ಹೊರಹೊಮ್ಮಲು ಪ್ರೇರಣೆಯಾಗುತ್ತದೆ. ಸುರೇಶ್, ಹರ್ಷ, ಮನೋಜ್ ಹಾಗೂ ಪವನ್ ಅವರನ್ನು ಒಳಗೊಂಡ ವಿದ್ಯಾರ್ಥಿಗಳ ತಂಡಕ್ಕೆ ಪ್ರಯಾಣಿಕರ ತಂಗುದಾಣ ನಿರ್ಮಿಸಲು ತೆಂಗಿನ ನಾರನ್ನು ಬಳಸುವ ಆಲೋಚನೆ ಹೊಳೆಯಿತು. ಉಪನ್ಯಾಸಕರ ಸಹಾಯದಿಂದ ಅವರು ಅದನ್ನು ಕಾರ್ಯರೂಪಕ್ಕೆ ಇಳಿಸಿದರು.

‘ನಾವು ತಯಾರಿಸುವಪ್ರಾಜೆಕ್ಟ್‌ ಕೇವಲ ಅಂಕಗಳಿಗೆ ಸೀಮಿತವಾಗಬಾರದು. ಬದಲಾಗಿ ಸಮಾಜಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಈ ಪ್ರಯೋಗಕ್ಕೆ ಮುಂದಾದೆವು. ಈ ಪ್ರಯತ್ನದ ಫಲವಾಗಿ ಈ ತಂಗುದಾಣ ನಿರ್ಮಾಣವಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿ ಹರ್ಷ.

ADVERTISEMENT

ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ರಾಘವೇಂದ್ರ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಿದ್ದು, ಪ್ರಾಂಶುಪಾಲ ಎಚ್.ಎಸ್.ರಮೇಶ್‍ಬಾಬು,ವಿಭಾಗದ ಮುಖ್ಯಸ್ಥೆಎ.ವಿ.ಸೀತಾ ಹಾಗೂ ಶ್ರೀಕಾಂತ್ ಅವರು ಸಾಥ್‌ ನೀಡಿದ್ದಾರೆ.

‘ತೆಂಗಿನನಾರು ಸಹಕಾರ ಮಂಡಳಿಯಿಂದ ತಂಗುದಾಣಕ್ಕೆ ಬೇಕಾದ4X6 ಅಡಿ ವಿಸ್ತೀರ್ಣದ ತೆಂಗಿನ ನಾರಿನ ಪ್ಲೇಟ್‍ಗಳನ್ನು ಖರೀದಿಸಿದೆವು. ಮಳೆಗೆ ಹಾನಿಯಾಗದಂತೆ ವಾಟರ್ ಪ್ರೂಫ್ ಕೋಟಿಂಗ್ ಮಾಡಿಸಿದ್ದೇವೆ. ಒಂದು ವೇಳೆ ಬೆಂಕಿ ಬಿದ್ದರೂ ಸುಡದಂತೆ ಅಂಟಿನ ಲೇಪನ ಮಾಡಿದ್ದೇವೆ. ಚಾವಣಿ ನಿಲ್ಲಿಸಲು ಕಬ್ಬಿಣದ ಸರಳುಗಳನ್ನು ಬಳಕೆ ಮಾಡಿದ್ದೇವೆ’ ಎಂದುತಂಡದಮುಖಂಡ ಮನೋಜ್ ಮಾಹಿತಿ ನೀಡಿದರು.

‘ಪ್ರಾಯೋಗಿಕವಾಗಿ ಕಾಲೇಜಿನ ಮುಂಭಾಗದಲ್ಲೇ ತಂಗುದಾಣ ನಿರ್ಮಿಸಿದ್ದೇವೆ. ಯೋಜನೆ ಪೂರ್ಣಗೊಳಿಸಲು ಎರಡು ತಿಂಗಳು ಬೇಕಾಯಿತು. ನಮ್ಮ ಪ್ರಯತ್ನಕ್ಕೆಸ್ಪಂದಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(ಕೆಎಸ್‍ಸಿಎಸ್‍ಟಿ) ₹7,500 ಪ್ರೋತ್ಸಾಹಧನ ನೀಡಿದೆ. ತಂಗುದಾಣಕ್ಕೆ ಒಟ್ಟು ₹12 ಸಾವಿರ ವೆಚ್ಚವಾಗಿದೆ. ಹೀಗಾಗಿ ‘ಎಸ್‌ವಿಐಟಿ ತಂಗುದಾಣ’ ಎಂದು ಹೆಸರಿಡಲಾಗಿದೆ’ ಎನ್ನುತ್ತಾರೆ ಪವನ್‌.

*

ನಗರದಲ್ಲಿ ಹಲವೆಡೆ ಬಸ್‌ ತಂಗುದಾಣಗಳಿಲ್ಲ. ನಮಗೆಆರ್ಥಿಕ ನೆರವು ನೀಡಿದರೆ ಕಡಿಮೆ ವೆಚ್ಚದಲ್ಲಿ ಇಂತಹ ತಂಗುದಾಣ ನಿರ್ಮಿಸಲು ಸಿದ್ಧ.
– ಮನೋಜ್, ವಿದ್ಯಾರ್ಥಿ

*

ಸರ್ಕಾರಗಳು ಈ ಬಗ್ಗೆ ಗಮನ ಹರಿಸಿದರೆತೆಂಗುನಾರಿನ ಮಂಡಳಿಗೂ ಅನುಕೂಲ. ತೆಂಗು ಬೆಳೆಗಾರರಿಗೂ ಆರ್ಥಿಕವಾಗಿ ನೆರವಾಗಲಿದೆ
–ಸುಬ್ರಹ್ಮಣ್ಯ ರಾಘವೇಂದ್ರ,ಸಹಾಯಕ ಪ್ರಾಧ್ಯಾಪಕ

ತಂಗುದಾಣದ ವಿಶೇಷತೆಗಳೇನು?

* 10 ಅಡಿ ಉದ್ದ, 12 ಅಡಿ ಅಗಲದ ತಂಗುದಾಣ
* ಚಾವಣಿಗೂ ತೆಂಗಿನ ನಾರಿನ ಬಳಕೆ
* ಮಳೆ ನೀರಿನಿಂದ ಹಾನಿಯಾಗದಂತೆ ತಡೆಯಲು ವಾಟರ್‌ ಪ್ರೂಫ್‌ ಕೋಟಿಂಗ್‌
* ಬೆಂಕಿ ನಿರೋಧಕ ಅಂಟಿನ ಲೇಪನ
* ಕೆಎಸ್‍ಸಿಎಸ್‍ಟಿಯಿಂದ ₹7,500 ನೆರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.