ADVERTISEMENT

ಕಂಗೊಳಿಸಲಿದೆ ‘ಕಮಲದ ಕೊಳ’

ಸ್ಮಾರ್ಟ್‌ಸಿಟಿ ಯೋಜನೆಯಡಿ ಮೊದಲ ಹಂತದಲ್ಲಿ ನಡೆಯಲಿದೆ ಅಭಿವೃದ್ಧಿ ಕಾಮಗಾರಿ

ಮನೋಹರ್ ಎಂ.
Published 12 ಮಾರ್ಚ್ 2020, 22:37 IST
Last Updated 12 ಮಾರ್ಚ್ 2020, 22:37 IST
ಕಬ್ಬನ್‌ ಉದ್ಯಾನದಲ್ಲಿರುವ ಕಮಲದ ಕೊಳ –ಪ್ರಜಾವಾಣಿ ಚಿತ್ರ
ಕಬ್ಬನ್‌ ಉದ್ಯಾನದಲ್ಲಿರುವ ಕಮಲದ ಕೊಳ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಬ್ಬನ್‌ ಉದ್ಯಾನದ ಬಾಲಭವನದ ಬಳಿ 10 ವರ್ಷಗಳಿಂದ ಹದಗೆಟ್ಟ ಸ್ಥಿತಿಯಲ್ಲಿರುವ ‘ಕಮಲದ ಕೊಳ’ ಶೀಘ್ರವೇ ಹೊಸ ರೂಪ ಪಡೆಯಲಿದ್ದು, ಸ್ಮಾರ್ಟ್‌ ಸಿಟಿ ಯೋಜನೆಯಡಿ ಇದರ ಅಭಿವೃದ್ಧಿ ಕಾಮಗಾರಿಗಳು ಆರಂಭಗೊಳ್ಳಲಿವೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಎರಡು ಹಂತಗಳಲ್ಲಿಉದ್ಯಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಮೊದಲ ಹಂತದಲ್ಲಿ ಕಮಲದ ಕೊಳದ ಅಭಿವೃದ್ಧಿ ಆದ್ಯತೆ ಪಡೆದುಕೊಂಡಿದೆ.

ಕಮಲದ ಕೊಳ ಕಬ್ಬನ್‌ ಉದ್ಯಾನದ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿತ್ತು. ಉದ್ಯಾನಕ್ಕೆ ಭೇಟಿ ನೀಡುವ ಅನೇಕರು ಕೊಳದಲ್ಲಿ
ರುವ ಕಮಲದ ಹೂಗಳನ್ನು ವೀಕ್ಷಿಸುತ್ತಾ ಸಮಯ ಕಳೆಯುತ್ತಿದ್ದರು. ಇದರ ಸುತ್ತಲೂ ಬಿದಿರು ಮೆಳೆಗಳುಮುಗಿಲೆತ್ತರಕ್ಕೆ ಬೆಳೆದಿದ್ದವು.‘ದ್ರೋಣ’ ಹೆಸರಿನ ಆಮೆ, ಮೀನುಗಳು ಹಾಗೂ 250ಕ್ಕೂ ಬಗೆಯ ಪಕ್ಷಿಗಳ ಆವಾಸ ಸ್ಥಾನ ಇದಾಗಿತ್ತು. ಈ ಎಲ್ಲ ವಿಶೇಷತೆಗಳಿಂದಕೊಳ ಸಾರ್ವಜನಿಕರನ್ನು ಸೆಳೆಯುತ್ತಿತ್ತು.

ADVERTISEMENT

ಆದರೆ, ದಿನ ಕಳೆದಂತೆ ಕೊಳದಲ್ಲಿ ಹೂಳು ಸಂಗ್ರಹವಾಗಿ, ಮೂಲ ಸ್ವರೂಪ ಕಳೆದುಕೊಳ್ಳುತ್ತಾ ಬಂತು. ಜನರು ಇತ್ತ ಸುಳಿಯಲು ಹಿಂದೇಟು ಹಾಕಿ, ಪಾಳು ಬಿದ್ದ ಸ್ಥಿತಿ ತಲುಪಿತು. ಕ್ರಮೇಣ ಕೊಳದ ಬಳಿಗೆ ಪ್ರವೇಶ ನಿರ್ಬಂಧಿಸಲಾಯಿತು. ಈ ಸ್ಥಿತಿಗೆ ತೋಟಗಾರಿಕೆ ಇಲಾಖೆಯ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್.ಸಲ್ಡಾನಾ ಅವರು2010ರಲ್ಲಿ ಧರಣಿ ಕುಳಿತಿದ್ದರು.

ಕೊಳದ ಸುತ್ತಲೂ ಬೆಳೆದಿದ್ದ ಒಣಬಿದಿರು ಮೆಳೆಗಳನ್ನು ಇಲಾಖೆ ಇತ್ತೀಚೆಗಷ್ಟೇ ತೆರವು ಮಾಡಿದೆ. ಆದರೂ ಕೊಳದ ನೀರು ಪಾಚಿ ಕಟ್ಟಿಕೊಂಡಿದೆ. ಕಳೆಗುಂದಿರುವ ಕೊಳದ ಸ್ಥಿತಿ ಬಗ್ಗೆ ಉದ್ಯಾನಕ್ಕೆ ಬರುವ ಜನ ಬೇಸರ ವ್ಯಕ್ತಪಡಿಸುತ್ತಾರೆ.

‘ಸ್ಮಾರ್ಟ್‌ಸಿಟಿ ಯೋಜನೆಯಡಿ ಕೊಳದ ಅಭಿವೃದ್ಧಿಗಾಗಿ ವಿಶೇಷ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಅಂದುಕೊಂಡಂತೆಯೇ ಆದರೆ ಈ ಹಿಂದಿಗಿಂತಲೂ ಕೊಳ ಸೊಗಸಾಗಿ ಕಾಣಿಸಲಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಕುಸುಮಾ.

‘ಉದ್ಯಾನದ ಕೇಂದ್ರಬಿಂದು ಆಗಿರುವ ‌ಕೊಳಕ್ಕೆ ಆಧುನಿಕ ಸ್ಪರ್ಶ ನೀಡಲಾಗುವುದು. ಕೊಳಕ್ಕೆ ಬಿದಿರು ಸಸಿಗಳ ನಡುವೆ ಮಳೆ ನೀರನ್ನು ನೇರವಾಗಿ ಹರಿಸಲು ಸಿದ್ಧತೆ ನಡೆಸಲಾಗಿದೆ. ಕಾಲುವೆ ಮಾದರಿಯ ಕಟ್ಟೆಗಳನ್ನು ನಿರ್ಮಿಸಿ ಕೊಳಕ್ಕೆ ನೀರು ಹರಿಸಲಾಗುವುದು. ಏಪ್ರಿಲ್‌ನಿಂದ ಕೊಳದ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿವೆ’ ಎಂದರು.

ಕೊಳದ ಸುತ್ತ ಪಾದಚಾರಿ ಮಾರ್ಗ: ಕೊಳದ ಸುತ್ತ ಸದ್ಯ ರಕ್ಷಣಾ ಬೇಲಿ ಹಾಕಲಾಗಿದೆ. ಜನ ಅಲ್ಲಿ ಬಂದು ಒಂದೆಡೆ ನಿಂತು ಕೊಳ ವೀಕ್ಷಿಸುತ್ತಿದ್ದರು. ಕೊಳದ ಸುತ್ತಲೂ ಜನರ ಓಡಾಟಕ್ಕೆ ಪಾದಚಾರಿ ಮಾರ್ಗ ಸಿದ್ಧವಾಗಲಿದೆ. ಕೊಳದಲ್ಲಿ ವಿವಿಧ ತಳಿಯ ಕಮಲದ ಗಿಡಗಳನ್ನು ಬೆಳೆಸುವ ಚಿಂತನೆ ಇದೆ.ಇಲಾಖೆ ವತಿಯಿಂದ ಈ ಹಿಂದೆ ಇದ್ದ ಸ್ಥಳದಲ್ಲೇ ವಿವಿಧ ತಳಿಯ ಬಿದಿರು ಸಸಿಗಳನ್ನು ನೆಡಲಾಗುವುದು’ ಎಂದು ಹೇಳಿದರು.

‘ಕ್ಯಾಸ್ಕೇಡ್’ ಶೈಲಿಯ ಕೃತಕ ಜಲಪಾತ
‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಕೊಳದ ಸಮೀಪ‍ದಲ್ಲಿ ವಿವಿಧ ಹಂತಗಳಲ್ಲಿ ನೀರು ಹರಿಯುವ ಕ್ಯಾಸ್ಕೇಡ್ ಶೈಲಿಯ ಕೃತಕ ಜಲಪಾತ ನಿರ್ಮಾಣವಾಗಲಿದೆ. ಹರಿಯುವ ನೀರು ಧುಮ್ಮಿಕ್ಕುವ ದೃಶ್ಯವನ್ನು ಜನ ಉದ್ಯಾನದಲ್ಲಿ ಕಣ್ತುಂಬಿಕೊಳ್ಳಬಹುದು’ ಎಂದುಕುಸುಮಾ ಮಾಹಿತಿ ನೀಡಿದರು.

‘ನೈಸರ್ಗಿಕವಾಗಿ ಹಾಗೂ ಕಾಂಕ್ರೀಟ್‌ಮುಕ್ತವಾಗಿ ಕೊಳ ಗತವೈಭವವನ್ನು ಪಡೆಯಲಿದೆ. ಅದರ ಅಂದ ಹೆಚ್ಚಿಸುವ ಉದ್ದೇಶದಿಂದಬೆಣಚುಕಲ್ಲು ಬಳಸಿ ‌ಸೇತುವೆಗಳನ್ನು ನಿರ್ಮಿಸಲಾಗುವುದು. ಜನರು ಸೇತುವೆ ಮೂಲಕ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ವಿವರಿಸಿದರು.

*
ಕಾಮಗಾರಿಗೆ ಬಳಸಿರುವುದು ಜನರ ತೆರಿಗೆ ಹಣ. ಕಮಲ ಕೊಳದ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ಸಮರ್ಪಕವಾಗಿ ಮಾಡಬೇಕು.
-ನಿಖಿತಾ, ಬೆಂಗಳೂರು ನಿವಾಸಿ

*
ಉದ್ಯಾನದ ನಕ್ಷೆಯಲ್ಲಿ ಕಮಲದ ಕೊಳ ಇರುವ ಮಾಹಿತಿ ಇದೆ. ಆದರೆ, ಕೊಳದ ಬಳಿ ತೆರಳಿದಾಗ ಅಲ್ಲಿನ ಸ್ಥಿತಿ ಕಂಡು ಬೇಸರವಾಯಿತು.
-ಶ್ರೀನಿವಾಸ್, ಪ್ರವಾಸಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.