ಬೆಂಗಳೂರು: ಕ್ರೂರ ಪ್ರವೃತ್ತಿ ಹೊಂದಿರುವ ನಾಯಿಗಳನ್ನು ಪತ್ತೆ ಹಚ್ಚಿ, ಶ್ವಾನ ನಿಗಾ ಕೇಂದ್ರದಲ್ಲಿ ಇಡದೇ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ತರಾಟೆಗೆ ತೆಗೆದುಕೊಂಡರು.
ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ಟೆಲಿಕಾಂ ಲೇಔಟ್‌ನಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ ಮೃತಪಟ್ಟ ಸೀತಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದರು.
‘ಶ್ವಾನ ನಿಗಾ ಕೇಂದ್ರ ಸ್ಥಾಪಿಸುವಂತೆ ಈ ಹಿಂದೆ ಸಾಕಷ್ಟು ಮಾರ್ಗದರ್ಶನ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಆದೇಶವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಕ್ರೂರ ಮನೋಭಾವ ಹೊಂದಿರುವ ನಾಯಿಗಳಿಗೆ ಕೆನಲ್ಸ್ ಶೆಲ್ಟರ್‌ಗಳನ್ನು ಸ್ಥಾಪಿಸಿ, ಅವುಗಳಲ್ಲಿ ಇಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ ಅವರು, ‘ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರು, ‘ಯಲಹಂಕದಲ್ಲಿ 15 ದಿನಗಳಲ್ಲಿ 50 ನಾಯಿಗಳ ಸಾಮರ್ಥ್ಯ ಹೊಂದಿರುವ ನಿಗಾ ಕೇಂದ್ರ ಸ್ಥಾಪಿಸಲಾಗುವುದು’ ಎಂದು ಉತ್ತರಿಸಿದರು.
ಕ್ರೂರ ನಾಯಿ ಹಾಗೂ ಪದೇ ಪದೇ ಜನರನ್ನು ಕಚ್ಚುತ್ತಿರುವ ನಾಯಿಗಳ ಬಗ್ಗೆ ನಿಗಾ ವಹಿಸಲು ಶ್ವಾನ ನಿಗಾ ಕೇಂದ್ರವನ್ನು ಎಲ್ಲಾ ವಾರ್ಡ್‌ಗಳಲ್ಲಿ ಸ್ಥಾಪಿಸಬೇಕು ಎಂದು ಪಾಟೀಲರು ಸೂಚನೆ ನೀಡಿದರು.
ಬೆಂಗಳೂರು ನಗರ ಮಾತ್ರವಲ್ಲದೆ, ಇತರೆ ಜಿಲ್ಲೆಗಳಲ್ಲಿಯೂ ಬೀದಿ ನಾಯಿಗಳ ದಾಳಿಯಿಂದ ಜನರು ಮೃತಪಟ್ಟಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ, ‘ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪಶು ಸಂಗೋಪನಾ ಇಲಾಖೆ ಆಯುಕ್ತರು, ಮಹಾನಗರ ಪಾಲಿಕೆ, ನಗರಸಭೆಯನ್ನು ಈ ಪ್ರಕರಣದಲ್ಲಿ ಪಕ್ಷಗಾರರನ್ನಾಗಿ ಮಾಡಿ ವರ್ಷದಲ್ಲಿ ಬೀದಿ ನಾಯಿ ಕಚ್ಚಿದ ಪ್ರಕರಣಗಳು, ರೇಬಿಸ್ ಪ್ರಕರಣಗಳು, ವ್ಯಾಕ್ಸಿನೇಷನ್ , ಎಬಿಸಿ ಮಾಡಿಸಿದ ಪ್ರಕರಣಗಳ ಸಂಖ್ಯೆ, ಶ್ವಾನ ತಾಣಗಳ ಬಗ್ಗೆ ವರದಿ ನೀಡಬೇಕು’ ಎಂದು ಸೂಚಿಸಿದರು.
ನ್ಯಾಯಾಲಯದ ಆದೇಶದಂತೆ ಸೀತಪ್ಪ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ನಿಗದಿಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.