ಬೀದಿನಾಯಿ
ಬೆಂಗಳೂರು: ಆಕ್ರಮಣಕಾರಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದ್ದರೂ, ಯಾವುದೇ ಕೆಲಸ ಮಾಡದೇ ಇರುವ ಕಾರಣಕ್ಕೆ ನಗರದಲ್ಲಿ ವೃದ್ಧರೊಬ್ಬರು ನಾಯಿಗಳು ಕಚ್ಚಿ ಮೃತಪಡುವಂತಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬ್ಯಾಟರಾಯನಪುರ ವಾರ್ಡ್‌ನಲ್ಲಿ ಇದೇ ಸೋಮವಾರ ನಾಯಿಗಳು ಕಚ್ಚಿ, ಸೀತಪ್ಪ ಅವರು ಮೃತಪಟ್ಟಿದ್ದರು. ಈ ಸಂಬಂಧ ಬುಧವಾರ ವಿಚಾರಣೆಗೆ ಹಾಜರಾಗುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಲೋಕಾಯುಕ್ತರು ಸೂಚಿಸಿದ್ದರು.
‘ಬ್ಯಾಟರಾಯನಪುರ ವಾರ್ಡ್‌ನಲ್ಲಿ ಬೀದಿ ನಾಯಿಗಳು ಕಚ್ಚಿ ಜನರು ಮೃತಪಟ್ಟ ಎರಡನೇ ಪ್ರಕರಣ ಇದು. ಈ ಬಗ್ಗೆ ಏಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಮನುಷ್ಯರ ಮೇಲೆ ಎರಗುವಂತಹ ನಾಯಿಗಳನ್ನು ಪತ್ತೆ ಮಾಡಿ, ಅವುಗಳನ್ನು ‘ಅಬ್ಸರ್ವೇಷನ್ ಹೋಂ’ನಲ್ಲಿ ಇರಿಸಿ ಎಂದು ಸೂಚಿಸಿದ್ದೆ. ಈ ಕೆಲಸ ಎಲ್ಲಿಯವರೆಗೆ ಬಂದಿದೆ’ ಎಂದು ಲೋಕಾಯುಕ್ತರು ಪ್ರಶ್ನಿಸಿದರು.
ಬಿಬಿಎಂಪಿಯ ಯಲಹಂಕ ವಲಯದ ಜಂಟಿ ನಿರ್ದೇಶಕ ಡಾ.ಚಂದ್ರಯ್ಯ, ‘ಯಲಹಂಕ ವಲಯದಲ್ಲಿ ‘ಅಬ್ಸರ್ವೇಷನ್ ಹೋಂ’ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಇರುವ ‘ಅಬ್ಸರ್ವೇಷನ್ ಹೋಂ’ನಲ್ಲಿ 33 ನಾಯಿಗಳನ್ನು ಇರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ವೃದ್ಧರ ಮೇಲೆ ಎರಗಿದ ಬೀದಿನಾಯಿಗಳನ್ನು ಗುರುತಿಸುವ ಕೆಲಸ ಇನ್ನೂ ಆಗಿಲ್ಲ ಎಂದು ಅಧಿಕಾರಿ ತಿಳಿಸಿದರು. ಆ ಕೆಲಸವನ್ನು ಶೀಘ್ರವೇ ಮಾಡಿ ಎಂದು ಲೋಕಾಯುಕ್ತರು ಸೂಚಿಸಿದರು.
ಬ್ಯಾಟರಾಯನಪುರ ವಾರ್ಡ್‌ನ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಕಚ್ಚಿದ 15–20 ಪ್ರಕರಣಗಳು ಪ್ರತಿ ತಿಂಗಳು ವರದಿಯಾಗುತ್ತಿವೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ವರದಿ ನೀಡಲಿದ್ದಾರೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಿ, ವರದಿ ನೀಡಿ ಎಂದು ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ಅವರಿಗೆ ಸೂಚಿಸಿದರು.
ದೊಡ್ಡನೆಕ್ಕುಂದಿ ಮತ್ತು ವಿಭೂತಿಪುರ ಕೆರೆಗಳ ಸಂರಕ್ಷಣೆಗೆ ಕ್ರಮ ತೆಗೆದುಕೊಂಡಿರುವ ಬಿಬಿಎಂಪಿ, ಬಿಡಿಎ ಮತ್ತು ಜಲಮಂಡಳಿ ಅಧಿಕಾರಿಗಳನ್ನು ಲೋಕಾಯುಕ್ತರು ಶ್ಲಾಘಿಸಿದರು.
ಎರಡೂ ಕೆರೆಗಳ ಸಂರಕ್ಷಣೆಗೆ ತೆಗೆದುಕೊಂಡಿರುವ ಕ್ರಮಗಳು ಮತ್ತು ಕಾಮಗಾರಿ ಪ್ರಗತಿಗೆ ಸಂಬಂಧಿಸಿದ ಚಿತ್ರಸಹಿತ ವರದಿಯನ್ನು ಅಧಿಕಾರಿಗಳು ಬುಧವಾರದ ವಿಚಾರಣೆ ವೇಳೆ ಲೋಕಾಯುಕ್ತರಿಗೆ ಸಲ್ಲಿಸಿದರು. ಅದನ್ನು ಪರಿಶೀಲಿಸಿದ ಲೋಕಾಯುಕ್ತರು, ‘ಉಳಿದ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ. ಈಗ ಆಗಿರುವ ಕೆಲಸಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.